ಶುಕ್ರವಾರ, ಜನವರಿ 10, 2025
ಮಲ್ಲಿನಾಥ ಕೆ.ಹಿರೇಮಠ
ಗ್ರಾಮೀಣ ಪ್ರದೇಶದ ಜನರಿಂದ ಬಾಯಿಂದ ಬಾಯಿಗೆ ಹರಿದು ಬಂದ ಜಾನಪದ ಗೀತೆ, ಹಾಡುಗಳನ್ನು ಸಂಪಾದಿಸಿ, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿ ಕೊಂಡವರೆಂದರೆ ಮಲ್ಲಿನಾಥ ಕೆ.ಹೀರೆಮಠ. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶ್ರೀ. ವೇದಮೂರ್ತಿ ಕರಬಸಯ್ಯಾ ಹೀರೆಮಠ ಮತ್ತು ಸುಭದ್ರಾಬಾಯಿ ಹೀರೆಮಠ ದಂಪತಿಗಳಿಗೆ ದಿನಾಂಕ ೧-೧-೧೯೬೭ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಹಾರಕೂಡದಲ್ಲಿ, ಪಿ.ಯು.ಮತ್ತು ಪದವಿ ಶಿಕ್ಷಣವು ಎಸ್.ಎಸ್.ಕೆ.ಬಿ. ಕಾಲೇಜು ಬಸವಕಲ್ಯಾಣದಲ್ಲಿ ಅಧ್ಯಯನ ಮಾಡಿ, ಎಂ.ಎ.ಸ್ನಾತಕೋತ್ತರ ಪದವಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪೂರೈಸಿ, ಬಿ.ಇಡಿ.ಶಿಕ್ಷಕರ ತರಬೇತಿಯು ಬೀದರದ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಪೂರೈಸಿದ್ದಾರೆ. ಹಾರಕೂಡ ಹೀರೆಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶಿವಾಚಾರ್ಯ ರತ್ನ ಧರ್ಮ ರತ್ನ, ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರ ಕಿರಿಯ ಸಹೋದರಾದ ಇವರು ೧೯೯೮ ರಲ್ಲಿ ಬಸವಕಲ್ಯಾಣ ತಾಲೂಕಿನ ಹತ್ಯಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಹಲವಾರು ವರ್ಷ ಉತ್ತಮ ಸೇವೆ ಸಲ್ಲಿಸಿ, ೨೦೦೬ ರಲ್ಲಿ ಕೊಹಿನೂರು ಗ್ರಾಮದ ಸರಕಾರಿ ಹಿರಿಯ ಮಾದರಿ ಶಾಲೆಗೆ ಬಡ್ತಿ ಹೊಂದಿ, ನಂತರ ೨೦೦೯ ರಲ್ಲಿ ಕೊಹಿನೂರು ವಾಡಿ ಶಾಲೆಯ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಮತ್ತೆ ೨೦೧೨ ರಲ್ಲಿ ಮುಖ್ಯ ಗುರುಗಳ ಹುದ್ದೆಯಿಂದ ಬಡ್ತಿ ಹೊಂದಿ ಕೊಹಿನೂರು ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಾರಕೂಡ ಶ್ರೀ ಮಠದ ಕುರಿತು ಗ್ರಾಮೀಣ ಪ್ರದೇಶದ ಭಕ್ತ ಜನರು ಸಾಕಷ್ಟು ಜಾನಪದ ಗೀತೆ,ಭಜನೆ ಹಾಡುಗಳು ಈ ಭಾಗದಲ್ಲಿ ತುಂಬ ಚಾಲ್ತಿಯಲ್ಲಿವೆ .ಅವುಗಳು ಮುಂದೊAದು ದಿನ ನಶಿಸಿ ಹೋಗಬಾರದೆಂಬ ಉದ್ದೇಶದಿಂದ ಜನಪದ ಸಾಹಿತ್ಯ ಉಳಿಸಿ ಬೆಳೆಸಬೇಕೆಂಬ ಕಾಳಜಿಯಿಂದ ಇವರು `ಕಲ್ಯಾಣ ನಾಡಿನ ಪರಂಜ್ಯೋತಿ' ಮತ್ತು `ಮಂಗಳ ಮಂಗಳಾರತಿ' ಎಂಬ ಎರಡು ಕೃತಿಗಳನ್ನು ಎಚ್.ಕಾಶಿನಾಥ ರೆಡ್ಡಿಯವರೊಂದಿಗೆ ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಬಿಡುವಿನ ಸಮಯದಲ್ಲಿ ಹಾರಕೂಡ ಶ್ರೀ ಮಠದ ಸಕಲ ಕಾರ್ಯ ಚಟುವಟಿಕೆಗಳಲ್ಲಿ ನಿರಂತರ ಕ್ರೀಯಶೀಲರಾಗಿ,ಶ್ರೀ ಮಠದ ಸತ್ಕಾರ್ಯಗಳಿಗೆ ಚಾಚು ತಪ್ಪದೆ ನಡೆಸಿಕೊಂಡು ಬರುವ ಇವರು ಸಾಹಿತ್ಯ ಸಂಪಾದನೆ ಮತ್ತು ಸಂಘಟನೆಯಲ್ಲಿಯೂ ತುಂಬ ಆಸಕ್ತರಾಗಿದ್ದರಿಂದ ಸತತ ೯ವರ್ಷ ಮೂರು ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮುಡಬಿ ಹೊಬಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯ ೨೦೦೩ರಲ್ಲಿ, ಹಾರಕೂಡ ಸುಕ್ಷೇತ್ರದಲ್ಲಿ ನಡೆದ ೭ನೆ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದು ಬರಲು ಇವರೂ ಕಾರಣಿ ಭೂತರಾಗಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಇವರ ಸಾಧನೆಗೆ ಬಸವಕಲ್ಯಾಣ ತಾಲೂಕು ಆಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿ' `ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಮತ್ತು ಕಲ್ಯಾಣ ಕರ್ನಾಟಕದ `ಶಿಕ್ಷಕ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರವು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರು ಹಾರಕೂಡ ಶ್ರೀ ಮಠದ ಪ್ರಕಾಶನದಿಂದಲೂ ಹಲವಾರು ಹಿರಿ- ಕಿರಿಯ ಸಾಹಿತಿಗಳ ಪುಸ್ತಕಗಳು ಪ್ರಕಟಿಸಿ ಅವರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ಪ್ರತಿವರ್ಷ ಕವಿ,ಸಾಹಿತಿ, ಕಲಾವಿದರಿಗೆ `ಶ್ರೀ ಚೆನ್ನ ರತ್ನ' ಪ್ರಶಸ್ತಿಯು ನೀಡಿ ಗೌರವಿಸುತ್ತಿರುವಲ್ಲಿ ಇವರ ಕೊಡುಗೆಯು ಅಪಾರವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ