ಬಸವಕಲ್ಯಾಣ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಸವಕಲ್ಯಾಣ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾನುವಾರ, ಜನವರಿ 19, 2025
ಡಾ.ವಿಜಯಲಕ್ಷ್ಮೀ ಗಡ್ಡೆ
ಸಾಹಿತಿ ಡಾ.ವಿಜಯಲಕ್ಷ್ಮೀ ಗಡ್ಡೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಮರೂರು ಗ್ರಾಮದ ದೇಶಮುಖಪ್ಪಾ ಪಾಟೀಲ್ ಮತ್ತು ಸುಶೀಲಾ ಪಾಟೀಲ್ ದಂಪತಿಗಳಿಗೆ ದಿನಾಂಕ ೧೩-೩-೧೯೬೪ ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಬಿ.ಇಡಿ ಪದವಿಧರರಾದ ಇವರು ಸಾಹಿತಿ ಹಾಗೂ ಪತ್ರಕರ್ತರಾದ ಬಸವಕಲ್ಯಾಣದ ಗುರುನಾಥ ಗಡ್ಡೆಯವರ ಧರ್ಮ ಪತ್ನಿಯಾಗಿದ್ದು, ಭಾಲ್ಕಿಯ ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿ, `ಉರಿಲಿಂಗ ಪೆದ್ದಿ ವಚನಗಳಿಗೆ ಭಾವಾರ್ಥ, ಚನ್ನಬಸವ ಪಟ್ಟದೇವರ ಜೀವನ ಚರೀತ್ರೆ,’ ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು ಹಲವಾರು ಕವನ ಲೇಖನ ಪ್ರಬಂಧಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ನಾಡಿನ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ವಿಚಾರ ಗೋಷ್ಠಿಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳು, ೩೦೦ಕ್ಕೂ ಅಧಿಕ ಭಾಷಣಗಳು ಮಾಡಿರುತ್ತಾರೆ. ಭಾಲ್ಕಿ ಮತ್ತು ಬೀದರ ಹಿರೇಮಠಗಳಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರವಚನವು ನೀಡಿದ್ದಾರೆ. ಇವರು ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ನಿರ್ದೇಶಕರಾಗಿ, ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿ ಸದ್ಯ ಬೀದರ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಮೇನಕಾ ಪಾಟೀಲ್.
ಬೀದರ ಜಿಲ್ಲೆಯ ಉದಯೋನ್ಮುಖ ಯುವ ಮಹಿಳಾ ಬರಹಗಾರ್ತಿಯರಲ್ಲಿ ಒಬ್ಬರಾಗಿ ಕವನ,ಲೇಖನ, ಆಧುನಿಕ ವಚನ,ಚುಟುಕು, ಹನಿಗವನ ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ, *ಮೇನಕಾ ಪಾಟೀಲ್*.ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಶರಣಪ್ಪ ನಂದಿ ಮತ್ತು ಜೈ ಶ್ರೀ ದಂಪತಿಗಳಿಗೆ ದಿನಾಂಕ ೧೮-೮-೧೯೮೫ ರಲ್ಲಿ ಜನಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಪಿ.ಯು.ಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ನಂತರ ಒಂದು ವರ್ಷದ *ಪತ್ರಿಕೋದ್ಯಮ* ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಎರಡು ವರ್ಷ ಮಂಗಳೂರಿನಿAದ ಪ್ರಕಟವಾಗುವ ' *ಸ್ತ್ರೀ ಶಕ್ತಿ*' ಎಂಬ ಮಾಸ ಪತ್ರಿಕೆಯಲ್ಲಿ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಆ ಪತ್ರಿಕೆಯಲ್ಲಿ ಲೇಖನ, ಅಂಕಣ ಬರಹಗಳು ಬರೆದ ಇವರು ಪ್ರಜಾವಾಣಿ, ಉದಯವಾಣಿ, ವಿಜಯವಾಣಿ,ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಹಾಗೂ *ಬಸವ ಟಿವಿ* ಯಲ್ಲಿಯೂ ಇವರ ಸಾಹಿತ್ಯದ ಕುರಿತಾದ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹುಟ್ಟಿದ ವರ್ಷವೇ ಹಸುಳೆಯಾದಾಗಲೆ ತಂದೆಯನ್ನು ಕಳೆದುಕೊಂಡ ಇವರು ದೊಡ್ಡವರಾದಂತೆ ಅವರ ತಂದೆ ಬರೆದು ಇಟ್ಟಿದ ದಿನಚರಿ ಸಾಹಿತ್ಯವನ್ನು ಓದಿ, ಅಪ್ಪಾಜಿಯ ಸಾಹಿತ್ಯಕ್ಕೆ ಮಾರುಹೋಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕಲಿತದ್ದು ಆಂಗ್ಲ ಮಾಧ್ಯಮದಲ್ಲಿ ಆದರೂ ಬರೆಯುವುದೆಲ್ಲ *ಕನ್ನಡ ಸಾಹಿತ್ಯ* ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇವರು ೨೦೧೮ ರಲ್ಲಿ ' *ಬಸವ ರಕ್ಷಾ*' ಎಂಬ ಒಂದು ಕವನ ಸಂಕಲನ, ಹಾಗೂ ೨೦೧೯ ರಲ್ಲಿ ಹುಲಸೂರು ಶ್ರೀಗಳ ಕುರಿತು ' *ಒಂದು ಜೀವನ ಚರಿತ್ರೆ*' ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಮತ್ತು ನೂರಾರು ಕವನ,ಲೇಖನ, ಹನಿಗವನಗಳು ಬರೆದ ಇವರು ಬೀದರ ಜಿಲ್ಲೆಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರ ಲೇಖನ ಉದಯವಾಣಿ ಸಂಪಾದಕೀಯ ಪುಟದಲ್ಲೂ ಪ್ರಕಟವಾಗಿವೆ ಅನ್ನೊದು ತುಂಬ ಖುಷಿಯ ವಿಷಯವಾಗಿದೆ. ಆದ್ದರಿಂದ ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ಬೀದರದ ಹಲವಾರು ಕನ್ನಡ ಪರ ಸಾಹಿತ್ಯ ಸಂಘಟನೆಯವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನವರು ಕೂಡ ಹಲವಾರು ಸಲ ಸತ್ಕರಿ ಗೌರವಿಸಿದ್ದಾರೆ. ಸದ್ಯ ಇವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವುದರೊಂದಿಗೆ, ಕೌಟುಂಬಿಕ ಜೀವನದಲ್ಲಿ ಗೃಹಿಣಿಯಾಗಿದ್ದುಕೊಂಡು ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದಾರೆ.
ಎಂ.ಆರ್.ಶ್ರೀಕಾಂತ
ಬೀದರ ಜಿಲ್ಲೆಯ ಉದಯೋನ್ಮುಖ ಬರಹಗಾರರ ಬಳಗದಲ್ಲಿ ಎಲೆ ಮರೆಯ ಕಾಯಿಯಂತೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಸೃಜನಶೀಲ ಕವಿ,ಸಾಹಿತಿಯೆಂದರೆ ಶ್ರೀಕಾಂತ ಮದರಗಾಂವಕರ್.ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೫-೨-೧೯೭೯ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಖಾಸಗಿ ಶಾಲೆಯೊಂದರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತರಾಗಿದ್ದರಿಂದ ಇವರು ಕವನ, ಆಧುನಿಕ ವಚನ, ಚುಟುಕು, ಹನಿಗವನ, ಲೇಖನ ಮೊದಲಾದ ಬರಹಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ' ಕಾಲಜ್ಞಾನ' ಎಂಬ ಕವನಸಂಕಲನ ಮತ್ತು ' ಶುಭೋದಯ' ಎಂಬ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದಾರೆ. ಹಾಗೂ ' ಶಬ್ದಗಳ ಸುಳಿಯಲ್ಲಿ' ಎಂಬ ವಿಮರ್ಶೆ ಕೃತಿ, 'ಕಾಲಜ್ಞಾನ' ಎಂಬ ಕವನಸಂಕಲನ, 'ವ್ಯಾಕರಣ ದರ್ಪಣ' ಎಂಬ ವ್ಯಾಕರಣ ಕೃತಿ, 'ಗಣಕ ರಹಸ್ಯ' ಎಂಬ ಕಂಪ್ಯೂಟರ್ ಶಿಕ್ಷಣ ಕೃತಿ, ಮತ್ತು' ಸಾಹಿತ್ಯ ಸಾಗರ' ಎಂಬ ಕನ್ನಡ ಸಾಹಿತ್ಯ ಕುರಿತಾದ ಲೇಖನಗಳ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಕವನ, ಚುಟುಕು, ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ,ವಿಜಯಕರ್ನಾಟಕ ವಿಜಯವಾಣಿ,ಜನಪರ, ಮಯೂರ, ಮಲ್ಲಿಗೆ,ಕರವೇ ನಲ್ನುಡಿ, ಧೀನರ ಧ್ವನಿ, ಮೊದಲಾದ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಕವನಸಂಕಲನಗಳಲ್ಲಿ ಹಾಗೂ ಕೆಲವು ಅಭಿನಂದನಾ ಗ್ರಂಥಗಳಲ್ಲಿ ಇವರ ಕವನ ಲೇಖನಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ೧೦ ಕವನಗಳು ಪ್ರಸಾರವಗಿವೆ. ಹಾಗೂ ೨೦೦೨ ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘದವರು ಏರ್ಪಡಿಸಿದ ರಾಜ್ಯ ಮಟ್ಟದ ಕವನಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನವು ಬಂದಿರುತ್ತದೆ. ಹಾಗೂ ೨೦೦೩ ರಲ್ಲಿ ಕಲಬುರಗಿಯ ಆಜಾದ್ ವಿಚಾರ ವೇದಿಕೆಯವರು ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ, ಮತ್ತು ಗದಗದ ಗಂಗಮ್ಮ ಪ್ರಕಾಶನದಿಂದ ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಇವರಿಗೆ ಪ್ರೋತ್ಸಾಹಕ ಬಹುಮನವು ಲಭಿಸಿವೆ. ಹೀಗೆ ಇವರ ಸಾಹಿತ್ಯ ಸೇವೆಯನ್ನು ಕಂಡು ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ 'ಕವಿರತ್ನ ಶ್ರೀ ಪ್ರಶಸ್ತಿ' ಮತ್ತು ೨೦೧೫ ರಲ್ಲಿ ಕನ್ನಡ 'ಕಾವ್ಯರತ್ನ ಪ್ರಶಸ್ತಿ ' ನೀಡಿದ್ದಾರೆ. ೨೦೧೬ ರಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘದ ವತಿಯಿಂದ 'ಕನ್ನಡ ಸೇವಾ ರತ್ನ' ಹಾಗೂ ೨೦೧೭ ರಲ್ಲಿ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ 'ಕನಕ ಶ್ರೀ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಪ್ರಭುಲಿಂಗಯ್ಯಾ ಬಿ.ಟಂಕಸಾಲಿಮಠ
ಚಿತ್ರಕಲಾವಿದ, ಸಾಹಿತಿ, ಪತ್ರಕರ್ತರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರಭುಲಿಂಗಯ್ಯಾ ಟಂಕಸಾಲಿಮಠ ಇವರು ಬೀದರ ಜಿಲ್ಲೆ ಹುಮನಾಬಾದಿನ ಬಸಯ್ಯಾ ಮತ್ತು ವಿದ್ಯಾವತಿ ದಂಪತಿಗಳಿಗೆ ದಿನಾಂಕ ೧೯-೯-೧೯೭೩ರಲ್ಲಿ ಜನಿಸಿದ್ದಾರೆ. ಚಿತ್ರಕಲೆಯಲ್ಲಿ ಸ್ನಾತಕೋತರ ಪದವಿಧರರಾದ ಇವರು ೨೫ವರ್ಷಗಳಿಂದ ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕಲೆ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಚಿತ್ರ-ಚಿತ್ತ', `ಕಲ್ಯಾಣ ಕಲಾಶ್ರೀ', `ಚಿಣ್ಣರ ಚುಟುಕು', `ಕಲ್ಯಾಣದ ಕಲಾ ಪ್ರತಿಭೆ', `ಹತ್ತು ಮುಖಗಳ ನೂರು ಭಾವಗಳು', `ಸಾಲು- ದೀಪ' ಎಂಬ ಕೃತಿಗಳು ತಮ್ಮ ಕಲಾನಿಕೇತನ ಪ್ರಕಾಶನದಿಂದ ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೦೭ರಿಂದ ೨೦೧೦ ರವರೆಗೆ ಬಸವಕಲ್ಯಾಣ ಕಸಾಪ ಅಧ್ಯಕ್ಷರಾಗಿ, ಉತ್ತರ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕಲಬುರಗಿಯ ಮಹಾನ್ ಚಿತ್ರಕಲಾವಿದ `ಡಾ.ಜೆ.ಎಸ್.ಖಂಡೇರಾವ ಪ್ರಶಸ್ತಿ, ಭಾಲ್ಕಿ ಮಠದಿಂದ ಡಾ.ಚನ್ನಬಸವ ಪಟ್ಟದೇವರ ಪ್ರಶಸ್ತಿ, ಹಾರಕೂಡ ಮಠದಿಂದ `ಶ್ರೀಚನ್ನ ರತ್ನ ಪ್ರಶಸ್ತಿ, ಹುಲಸೂರು ಮಠದಿಂದ `ಕಲಾ ಪ್ರೇಮಿ' ಭಾತಂಬ್ರಾ ಮಠದಿಂದ `ಕಲಾ ರತ್ನ' ಮತ್ತು ಬಸವಕಲ್ಯಾಣ ತಾಲೂಕಾ `ಗಣರಾಜ್ಯೋತ್ಸವ' ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಬಸವಕಲ್ಯಾಣದಲ್ಲಿ ವಾಸವಾಗಿದ್ದು, ಅಪಾರ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹ ಮಾಡಿರುವುದರೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಮಾತೆ ಸುಜ್ಞಾನಿದೇವಿ
ಬಸವಕಲ್ಯಾಣದ ಮಾತೆ ಸುಜ್ಞಾನಿದೇವಿ ಇವರು ಓಬಯ್ಯ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧೧-೧೨-೧೯೪೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಧರ್ಮ ಪ್ರಚಾರಕರಾಗಿ ೧೯೮೧ರಲ್ಲಿ `ಶರಣ ಶಕ್ತಿಯ ಸಂದೇಶ ಭಾಗ- ೧.೨.೩.೪.೫. ಎಂಬ ಕೃತಿ ಐದು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.
ಮಂಗಳವಾರ, ಜನವರಿ 14, 2025
ಸೂರ್ಯಕಾಂತ ಸಸಾನೆ.
ಕನ್ನಡ, ಮರಾಠಿಯಲ್ಲಿ ಸಾಹಿತ್ಯ ರಚಿಸಿದ ಲೇಖಕರೆಂದರೆ ಸೂರ್ಯಕಾಂತ ಸಸಾನೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಳಬೋಗ ಗ್ರಾಮದ ಸಂಭಾಜಿ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೦-೧೯೭೩ ಜನಿಸಿದ್ದಾರೆ. ಬಿ.ಎಸ್ಸಿ.ಬಿ.ಇಡಿ. ಪದವಿಧರರಾದ ಇವರು ಭಾಲ್ಕಿಯ ಡಾವರಗಾಂವದ ಅನುದಾನಿತ ವಸಂತ ಪ್ರೌಢ ಶಾಲೆಯಲ್ಲಿ ಮರಾಠಿ ಮಾಧ್ಯಮದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾದರು ವ್ಯವಹಾರಿಕ ಭಾಷೆ ಕನ್ನಡವಾಗಿದೆ. ಇವರು ಕನ್ನಡದಲ್ಲಿ ಶಿಕ್ಷಣ ಕಲಿಯದೆ `ಅಂಕಲಿಪಿ' ಮೂಲಕ ಅಕ್ಷರ ಕಲಿತು ದ್ವಿ ಭಾಷಾ ಕವಿಯಾಗಿ ಹೊರಹೊಮ್ಮಿದ್ದಾರೆ.
ಇವರು ಮರಾಠಿಯಲ್ಲಿ `ಅಣ್ಣಾ ಭಾವು ಸಾಠೆ’ ಎಂಬ ಜೀವನ ಚರಿತ್ರೆ, `ವಿನಯ’ ಎಂಬ ಕವನಸಂಕಲನ ಪ್ರಕಟಿಸಿದ್ದು ಮತ್ತು `ಏಕ ಸೇ ಏಕ್ ಜ್ಞಾನಿಚಾ ಪರಿಚಯ ಆಣಿ ಸಂದೇಶ' ಹಾಗೂ `ಜ್ಣಾನ ದೀಪ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಹಾಗೂ ಕನ್ನಡದಲ್ಲಿ `ಕ್ರಾಂತಿ ಗುರು ಲಹುಜಿ ಸಾಳವೆ’ ಎಂಬ ಕೃತಿ ಪ್ರಕಟಿಸಿ `ಅಣ್ಣಾ ಬಾವು ಸಾಠೆ’ ಜೀವನ ಚರಿತ್ರೆಯು ಕನ್ನಡಕ್ಕೆ ಅನುವಾದಿಸಿದ್ದಾರೆ. ಮತ್ತು ಅಣ್ಣಾಭಾವು ಸಾಠೆಯವರ ಹುಟ್ಟು ಹಬ್ಬವನ್ನು ೧೯೯೪ರಿಂದ ಕರ್ನಾಟಕದಲ್ಲಿ ಮೊದಲು ಪ್ರಾರಂಭ ಮಾಡಿದ ಇವರು ತಮ್ಮ ಹುಟ್ಟೂರಿನಲ್ಲಿ ಪ್ರತಿವರ್ಷ ಜಯಂತಿ ಆಚರಿಸುತ್ತಾರೆ. ಇವರಿಗೆ ೨೦೦೪ರಲ್ಲಿ ಬೀದರ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ, ೨೦೧೨ರಲ್ಲಿ ವೀರಶೈವ ಮಹಾಸಭಾ ಬೆಂಗಳೂರಿನಿAದ `ಬಸವಶ್ರೀ ಪ್ರಶಸ್ತಿ' ೨೦೨೦ರಲ್ಲಿ ಹುಮನಾಬಾದಿನ ಎಕ್ಸಿಲೆಂಟ್ ಶಿಕ್ಷಣ ಸಂಸ್ಥೆಯಿAದ `ಅಣ್ಣಾ ಭಾವು ಸಾಠೆ' ಕೃತಿ ಕನ್ನಡಕ್ಕೆ ಅನುವಾದಿಸಿದ್ದರಿಂದ `ಕಾರಂಜಾ ರತ್ನ' ಪ್ರಶಸ್ತಿಯು ನೀಡಿ ಸತ್ಕರಿಸಿದ್ದಾರೆ.
ಶನಿವಾರ, ಜನವರಿ 11, 2025
ಪೂಜ್ಯ. ಶ್ರೀ. ಷ.ಬ್ರ. ಡಾ.ಚೆನ್ನವೀರ ಶಿವಾಚಾರ್ಯರು
ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದು ಭಕ್ತರ ಪ್ರೀತಿ ಪಾತ್ರಕ್ಕೆ ಒಳಗಾಗಿ, ಅಪಾರ ಕನ್ನಡ ಮತ್ತು ಸಂಸ್ಕೃತ ಭಾಷಾ ಪಾಂಡಿತ್ಯ ಹೊಂದಿ, ನಿರ್ಮಲ ಮನಸ್ಸಿನಿಂದ ಸದಾ ಒಂದಿಲೊAದು ರೀತಿಯ ಸಾಮಾಜಿಕ ಕಳಕಳಿ ಉಳ್ಳ ಮಠಾಧೀಶರು ಹಾಗೂ ಸಾಹಿತಿಗಳಾಗಿ ನಾಡಿನಾದ್ಯಂತ ಚಿರಪರಿಚಿತರಾದವರೆಂದರೆ ಪೂಜ್ಯ. ಶ್ರೀ.ಷ.ಬ್ರ.ಡಾ.ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ವೇದಮೂರ್ತಿ.ಶ್ರೀ. ಕರಬಸಯ್ಯಾ ಹಿರೇಮಠ ಮತ್ತು ಸುಭದ್ರಾಬಾಯಿ ತಾಯಿಯವರ ಉದರದಲ್ಲಿ ದಿನಾಂಕ ೧-೭-೧೯೬೩ರಲ್ಲಿ ಜ£ಸಿದ್ದಾರೆ. ಇವರ ಮೂಲನಾಮ ರೇವಣಸಿದ್ದಯ್ಯ ಎಂದಾಗಿದೆ. ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾರಕೂಡದಲ್ಲಿ, ಪ್ರೌಢ ಶಿಕ್ಷಣ, ಶರಣಬಸವೇಶ್ವರ ಪ್ರೌಢ ಶಾಲೆ ಕಲಬುರಗಿಯಲ್ಲಿ, ಪದವಿಯನ್ನು ೧೯೮೪ರಲ್ಲಿ ಬೆಳಗಾವಿಯ ಕೆ.ಎಲ್.ಇ.ಶಿಕ್ಷಣ ಸಂಸ್ಥೆಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಪೂರೈಸಿ ೧೯೮೬ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗಂಗಾಧರ ರಾಜಯೋಗಿಂದ್ರ ಜಗದ್ಗುರುಗಳು ಅತ್ಯಾನಂದದಿAದ ಶ್ರೀಮಠದಲ್ಲಿ ಪೂಜಾ ಪ್ರಸಾದಕ್ಕೆ ಅನುಕೂಲ ಮಾಡಿಕೊಡುವುದರೊಂದಿಗೆ ಉತ್ತಮ ಆಚಾರ-ವಿಚಾರ, ಚಿಂತನೆಗಳು ಬೋಧಿಸಿ, ಪರಿಸರ ಪ್ರಜ್ಞೆ, ಧರ್ಮ ಶಿಕ್ಷಣ, ಸಂಸ್ಕೃತಿ ಸಂವರ್ಧನೆ ಬಲಪಡಿಸುವುದರ ಮೂಲಕ ೧೯೯೬ ಎಪ್ರಿಲ್ ೨೫ರಂದು ಹಾರಕೂಡ ಹಿರೇಮಠ ಸಂಸ್ಥಾನಕ್ಕೆ ಪಟ್ಟಾಧಿಕಾರ ಹೊಂದಿ ಶ್ರೀ ರೇವಣಸಿದ್ದ ದೇವರು ಶ್ರೀ ಷಟಸ್ಥಲ ಬ್ರಹ್ಮ. ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳಾಗಿ ದಕ್ಷಿಣ ಭಾರತದಲ್ಲಿಯೆ ಕೋಟಿ ಕೋಟಿ ಭಕ್ತರ ಪ್ರೀತಿಯ ಸ್ವಾಮಿಗಳಾಗಿ ಹೆಸರುವಾಸಿಯಾಗಿದ್ದಾರೆ.
ಶ್ರೀಮಠದ ಏಳಿಗೆಯೊಂದಿಗೆ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಪ್ರೇಮಿಯಾಗಿ ‘ಚೆನ್ನ ಚಿಂತನ’ ಎಂಬ ಪುಸ್ತಕದಿಂದ ಲೇಖಕರಾಗಿ ಖ್ಯಾತರಾಗಿದ್ದಾರೆ. ತುಂಬ ಮೌಲಿಕ ವಿಚಾರಗಳು ಹೊಂದಿರುವ ಈ ಕೃತಿ ಪ್ರಜಾವಾಣಿಯ ಅಂಕಣ ಬರಹವಾಗಿ ಅಪಾರ ಜನಮೆಚ್ಚುಗೆಯು ಗಳಿಸಿದೆ. ಮತ್ತು ‘ಹಡಪದ ಅಪ್ಪಣ್ಣನ ನೂರೊಂದು ವಚನಗಳು’ (ಸಂಪಾದನೆ) ಮತ್ತು ‘ಚನ್ನಚಂದ್ರಾಹಾರ’ (ಕವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಧರ್ಮ, ಸಮಾಜ, ಶಿಕ್ಷಣ ಮತ್ತು ಸಾಹಿತ್ಯದೊಂದಿಗೆ ನಿಕಟ ಸಂಬAಧ ಹೊಂದಿರುವುದರಿಂದ ಧಾರ್ಮಿಕ ತಳಹದಿಯಲ್ಲಿ ಚಿಂಚೋಳಿ, ದುಬಲಗುಂಡಿ, ಸೇಡೊಳ್ ಸರಜವಳಗಾ, ಗದಲೇಗಾಂವ, ತರೂರಿ, ಜೀವಣಗಿ ಶಾಖಾ ಮಠಗಳೊಂದಿಗೆ ಭಕ್ತರ ಒಡನಾಡಿಯಾಗಿ ಗುರುತಿಸಿಕೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ತುಂಬ ಕಾಳಜಿ ಹೊಂದಿದ ಶ್ರೀಗಳು ಹಾರಕೂಡ, ಭಾಲ್ಕಿ, ಚಿಂಚೋಳಿ, ಮುಂತಾದ ಕಡೆಗಳಲ್ಲಿ ಶಿಶುವಿಹಾರ, ಪ್ರಾಥಮಿಕ, ಪ್ರೌಢ ಶಾಲಾ ಕಾಲೇಜುಗಳು ನಡೆಸುವಲ್ಲಿ ಬಡ, ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಶ್ರಮಿಸುತ್ತಿದ್ದಾರೆ. ಮತ್ತು ಸಾಹಿತ್ಯಿಕವಾಗಿಯು ನಾಡಿನಾದ್ಯಂತ ಹಲವಾರು ಹಿರಿ-ಕಿರಿಯ ಲೇಖಕರ ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರತಿ ವರ್ಷ ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯ ಸ್ಮರಣೆಯ ಅಂಗವಾಗಿ ಅನುಭಾವ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ ನಡೆಸುವುದರೊಂದಿಗೆ ಲೇಖಕರ ಪುಸ್ತಕಗಳು ಬಿಡುಗಡೆ ಮಾಡುತ್ತಾರೆ. ಇಲ್ಲಿಯವರೆಗೆ ೮೯ ಕೃತಿಗಳು ಹೊರ ಬಂದಿರುವುದು ನೋಡಿದರೆ ಅವರ ಸಾಹಿತ್ಯದ ಪ್ರೀತಿ, ಕಾಳಜಿ ಇಲ್ಲಿ ಎದ್ದು ತೊರುತ್ತದೆ. ಅಷ್ಟೇಯಲ್ಲದೆ ನಾಡಿನಾದ್ಯಂತ ಉತ್ತಮ ಸಾಹಿತ್ಯ ರಚಿಸಿ ಖ್ಯಾತರಾದ ಹಿರಿಯ ಸಾಹಿತಿಗಳಿಗೆ ೨೦೧೧ರಿಂದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ ನೀಡುತ್ತಿದ್ದಾರೆ. ಇದು ಶ್ರೀ ಮಠದಿಂದ ಕೊಡುವ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದು ಒಂದು ಲಕ್ಷ ರೂಪಾಯಿ ನಗದು, ಒಂದು ತೊಲೆ ಚಿನ್ನದ ಪದಕ ಒಳಗೊಂಡಿದೆ. ಮತ್ತು ಸಂಗೀತದಲ್ಲಿ ಸಾಧನೆ ಮಾಡಿದವರಿಗೆ ೨೦೧೮ರಿಂದ ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ನೀಡುತ್ತಿದ್ದಾರೆ. ಇದು ಶ್ರೀಗಳ ಪಿತಾಮಹ ದಿ.ವೇ.ಶ್ರೀ. ಕರಬಸಯ್ಯಾ ಸ್ವಾಮಿ ಹಿರೇಮಠ ಅವರ ಸ್ಮರಣಾರ್ಥವಾಗಿ ೧೦ ಸಾವಿರ ನಗದು, ಪ್ರಶಸ್ತಿ ಫಲಕ £Ãಡಿ ಗೌರವಿಸಿದರೆ, ಚಿಂಚೋಳಿ ಶಾಖಾ ಮಠದಿಂದ ಯುವ ಲೇಖಕರಿಗೆ ‘ಚೆನ್ನ ಶ್ರೀ’ ಪ್ರಶಸ್ತಿ ನೀಡಿ ೫ಗ್ರಾಂ.ಚಿನ್ನ ಪ್ರಶಸ್ತಿ ಫಲಕದೊಂದಿಗೆ ಗೌರವಿಸುತ್ತಿದ್ದಾರೆ. ಅಷ್ಟೇಯಲ್ಲದೆ ೨೦೨೦ರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿ, ಮತ್ತು ಭಜನಾ ಸಂಘ ಸಂಸ್ಥೆಗಳಿಗೆ ಭಜನ ಸೇವಾ ರತ್ನ ಪ್ರಶಸ್ತಿ, ನೀಡಿ ಗೌರವಿಸಿದರೆ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ‘ಶ್ರೀ ಚೆನ್ನರತ್ನ’ ಪ್ರಶಸ್ತಿಯು ನೀಡುತ್ತಿದ್ದಾರೆ. ಮತ್ತು ಪ್ರತಿವರ್ಷ ಹಾರಕೂಡ ಜಾತ್ರೆಯ ಕೊನೆಯ ದಿನದಂದು ‘ಉತ್ತಮ ಜೋಡೆತ್ತು’ ಪ್ರದರ್ಶನ ಮಾಡಿದ ರೈತರಿಗೆ ಒಂದು ತೊಲೆ ಚಿನ್ನದ ಉಡುಗೊರೆಯು ನೀಡಿ ಗೌರವಿಸುತ್ತಾರೆ.
ಇವರು ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಹಾರಕೂಡ ಮಠದ ಪ್ರಕಾಶನದಿಂದ ೪೦ ಲಕ್ಷ ಖರ್ಚಿನಲ್ಲಿ ೧೫ ವಿಷಯ ವಚನ ಸಂಪುಟಗಳು ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿ ಮಠ ಅವರಿಂದ ಸಂಪಾದಿಸಿ ಪ್ರಕಟಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇವರ ಕಾರ್ಯ ಸಾಧನೆಗೆ ಗುಲ್ಬರ್ಗ ವಿಶ್ವವಿದ್ಯಾಲಯವು ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದರೆ ಕರ್ನಾಟಕ ಸರ್ಕಾರ ೨೦೧೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ಅಪಾರ ಭಕ್ತ ವರ್ಗ ಹೊಂದಿದ ಇವರಿಗೆ ಗದಲೇಗಾಂವ, ಸೇಡಂ, ಬಸವಕಲ್ಯಾಣದಲ್ಲಿ ಹುಟ್ಟು ಹಬ್ಬದ ನಿಮಿತ್ತವಾಗಿ ಚಿನ್ನದ ಕಿರಿಟವು ತೊಡಿಸಿ ಗೌರವಿಸಿದ್ದಾರೆ. ಬಾಳೆಹೊನ್ನೂರಿನ ಜಗದ್ಗುರು ರಂಭಾಪುರಿ ಶ್ರೀಗಳು ‘ಶಿವಾಚಾರ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರೆ, ಉತ್ತರ ಪ್ರದೇಶದ ಕಾಶಿ ಜಗದ್ಗುರು ಪೀಠದಿಂದ ‘ಧರ್ಮ ರತ್ನ’ ನೀಡಿದ್ದಾರೆ. ಉಜ್ಜಯಿನಿ ಪೀಠದಿಂದ ‘ಸದ್ಧರ್ಮ ಶಿಖಾಮಣಿ’ ಪ್ರಶಸ್ತಿ, ಕಮಲಾಪೂರದಿಂದ ‘ಮನುಕುಲ ರತ್ನ’ ಪ್ರಶಸ್ತಿ, ಕಲಬುರಗಿಯಿಂದ ‘ದಾಸೋಹ ಜ್ನಾನ ರತ್ನ’ ಪ್ರಶಸ್ತಿ, ಹುಲಸೂರಿನಿಂದ ‘ಕಲ್ಯಾಣ ಕರ್ನಾಟಕ ರತ್ನ’ ಪ್ರಶಸ್ತಿ, ಎನ್.ಆರ್.ಜಿ.ಪೌಂಡೆಷನ್ ವತಿಯಿಂದ ‘ಕಲ್ಯಾಣ ಕರ್ನಾಟಕ ಅಧ್ಯಾತ್ಮ ಸಿರಿ’ ಪ್ರಶಸ್ತಿ, ಮುಂಡರಗಿಯಿAದ ‘ಜಗದ್ಗುರು ಅನ್ನದಾನೇಶ್ವರ ಪ್ರತಿಷ್ಠಾನದ ಪ್ರಶಸ್ತಿ’ ಕಲಬುರ್ಗಿಯ ಸ್ವರ ಮಾಧುರಿ ಸಂಗೀತ ವಿದ್ಯಾಲಯದಿಂದ ‘ಸ್ವರ ಮಾಧುರಿ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದು ಖ್ಯಾತರಾಗಿದ್ದಾರೆ. ೨೦೦೩ರಲ್ಲಿ ಇವರ ದಿವ್ಯ ಸಾನಿಧ್ಯದೊಂದಿಗೆ ಹಾರಕೂಡ ಸಂಸ್ಥಾನ ಮಠದ ಆವರಣದಲ್ಲಿ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಅದ್ದೂರಿಯಾಗಿ ನಡೆದು ಬಂದಿದೆ.
ಇವರ ಕುರಿತು ಮುಸ್ಲಿಂ ಸಾಹಿತಿಗಳಾದ ಹುಸೇನ್ ಸಾಬ ಮಾಸ್ತರ್, ಕೊಹಿನೂರಿನ ಮಲಂಗ ಶಾ ಬಾಬಾ, ರಸೂಲ್ ಸಾಬ್ ಬಾಬಾ ,ಲಾಲ ಮಹಮ್ಮದ್ ಶಾ, ನಬಿಲಾಲ, ಎಲ್.ಬಿ.ಕೆ.ಅಲ್ದಾಳ, ಮುಂತಾದವರು ಭಕ್ತಿಯಿಂದ ಸಾಹಿತ್ಯ ರಚಿಸಿದ್ದರೆ. ಮಚ್ಚೇಂದ್ರ ಪಿ.ಅಣಕಲ್ ಅವರು ‘ಹರ ಹರಾ ಹಾರಕೂಡೆಶ್ವೇರ’ ಎಂಬ ಅಂಕಿತನಾಮದಿAದ ನೂರಾರು ಅಧುನಿಕ ವಚನಗಳು ಬರೆದರೆ ಡಾ.ಶಿವಶರಣಯ್ಯಾ ಎಂ.ಮಠಪತಿಯವರು ‘ಹಾರಕೂಡದೀಶ ಶ್ರೀ ಚನ್ನವೀರ ಪ್ರಿಯ ಚನ್ನಬಸವೇಶ್ವರ’ ಎಂಬ ಅಂಕಿತನಾಮದಿAದ ಹಲವಾರು ವಚನಗಳು ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಇವರ ೫೭ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಪತ್ರಕರ್ತ, ಸಾಹಿತಿ ಮಾಣಿಕ ಆರ್.ಭುರೆಯವರು ‘ನುಡಿಚೆನ್ನ’ ಎಂಬ ಅಭಿನಂದನಾ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಮುಸ್ಲಿಂರು ದಲಿತರಿಗೆ ಈ ಮಠದಲ್ಲಿ ಸರ್ವಧರ್ಮ ಸಮಾನತೆ ಸಾರಲು ಪೂಜ್ಯ. ಡಾ. ಚನ್ನವೀರ ಶಿವಾಚಾರ್ಯರು ಕಾರಣಿಭೂತರಾಗಿದ್ದಾರೆ.
ಶುಕ್ರವಾರ, ಜನವರಿ 10, 2025
ವಿವೇಕಾನಂದ ಸಜ್ಜನ
ಯುವ ವಿಮರ್ಶಕ ಹಾಗೂ ಲೇಖಕರಾದ ವಿವೇಕಾನಂದ ಸಜ್ಜನ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಜಗನ್ನಾಥ ಸಜ್ಜನ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧೮-೭-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾಗಿ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೨೦೧೮ರಲ್ಲಿ `ವಚನ ವೈವಿಧ್ಯ' (ವಿಮರ್ಶಾ) ೨೦೧೯ರಲ್ಲಿ `ಕನ್ನಡ ರಾಮಾಯಣಗಳಲ್ಲಿ ರಾವಣ' ಎಂಬ ತೌಲನಿಕ ಅಧ್ಯಯನ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಇವರ ಚೊಚ್ಚಲ ಕೃತಿ `ವಚನ ವೈವಿಧ್ಯ' ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಧನಸಹಾಯ ಪಡೆದುಕೊಂಡಿದೆ. ಇವರ ಬರಹಗಳು `ಶ್ರೀ ಅರವಿಂದರ ಸಂದೇಶ’ `ಇಂಟರ್ ನ್ಯಾಶನಲ್ ಜರ್ನಲ್ ಆಫ್ ಕನ್ನಡ ರಿಸರ್ಚ್’ ಅರುಹು ಕುರುಹು, ಕವಿಮಾರ್ಗ, ರಚನಾ ತ್ರೈಮಾಸಿಕ ಮೊದಲಾದ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೯ರಲ್ಲಿ ಇವರ `ವಚನ ವೈವಿಧ್ಯ' ಕೃತಿಗೆ ಬಹುಮಾನ ಲಭೀಸಿದೆ.
ಬಸವೇಶ್ವರಿ ಕೆ.ದೇಗಲೂರೆ
ಉದಯೋನ್ಮಖ ಕವಯತ್ರಿ ಬಸವೇಶ್ವರಿ ಕೆ.ದೇಗಲೂರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣದ ಕಲ್ಲಪ್ಪಾ ಮತ್ತು ಮೀನಾಕ್ಷಿ ದಂಪತಿಗಳಿಗೆ ದಿನಾಂಕ ೪-೫-೧೯೯೨ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಎಸ್ಸಿ. ಬಿ.ಇಡಿ. ಪದವಿಧರರಾದ ಇವರು ಹಿಂದಿ ವಿಷಯದಲ್ಲಿಯು ಪದವಿ ಪಡೆದು ಬಸವ ಪ್ರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಬೆಳೆದ ಇವರು ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ, ವಚನ, ಜೀವನ ಚರಿತ್ರೆ ಮೊದಲಾದವು ರಚಿಸಿ ಕೆಲ `ಅಪ್ಪಾಜಿ’ (ಕವನಸಂಕಲನ) `ಶ್ರೀ ಸರಡಗಿಯ ಸಂಭ್ರಮ’ (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಇವರು ಬರಹಗಳು ಬೀದರದ ಜನಪ್ರಿಯ ಪ್ರಕಾಶನದ ವತಿಯಿಂದ ಹೊರತಂದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ನೂರು ಆಧುನಿಕ ವಚನಗಳು, ಒಂದು ಸಾವಿರ ಸ್ವರಚಿತ ನುಡಿಗಟ್ಟುಗಳು ರಚಿಸಿ ಇಂಗ್ಲಿಷ್ ಭಾಷೆಯಲ್ಲಿಯು ನೂರಾರು ಕವನಗಳು ರಚಿಸಿರುವ ಇವರು ಬೆಂಗಳೂರಿನ ಬಸವ ಸಮಿತಿಯವರು ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ. ಹಾಗೂ ಬೆಂಗಳೂರಿನ ದಾಸರಹಳ್ಳಿಯ ಸುನಂದಾ ಸಾಹಿತ್ಯ ವೇದಿಕೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೀದರದ ದಾಸ ಸಾಹಿತ್ಯ ಸಮ್ಮೇಳನದ ನಿಮಿತ್ತವಾಗಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೂ ೨೦೧೧ರಲ್ಲಿ ಸುನಂದ ಸಾಹಿತ್ಯ ವೇದಿಕೆಯು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಇವರ ಪ್ರಬಂಧಕ್ಕೆ `ಭಲೆ ಬಸವ ಪ್ರಶಸ್ತಿ’ ಯು ನೀಡಿ ಗೌರವಿಸಿದೆ. ಹಾಗೂ ಚಂದ್ರ ಸ್ನೇಹ ಸೇತು ಸಾಮಾಜಿಕ ಸಾಂಸ್ಕೃತಿಕ ಸೇವಾ ಸಂಸ್ಥೆ ಶಿಲ್ಪನಾದ ಮಧುರ ಸಂಗೀತ ಮಹಾವಿದ್ಯಾಲಯ ರಂಗAಪೇಟ ಸುರಪುರದಿಂದ ಕಲಾಣ ನಾಡಿನ ಕಲಾರಾಧನ ಪ್ರಶಸ್ತಿಯು ನೀಡಿ ಗೌರವಿಸಿದೆ.
ನೀತಿನ್ ನೀಲಕಂಠೆ
ಉದಯೋನ್ಮುಖ ಯುವ ಬರಹಗಾರಾದ ನೀತಿನ್ ನೀಲಕಂಠೆಯವರು ಬೀದರ ಜಿಲ್ಲೆ ಬಸವಕಲ್ಯಾಣದ ಶಿವರಾಜ ನೀಲಕಂಠೆ ಮತ್ತು ಸೋನಾಲಿ ಎಂಬ ದಂಪತಿಗಳಿಗೆ ದಿನಾಂಕ ೨೬-೩-೧೯೯೨ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಬಿ.ಇಡಿ.ಪದವಿ ಪಡೆದು ಮುರಾರ್ಜಿ ದೇಶಾಯಿ ವಸತಿ ಶಾಲಾ ಶಿಕ್ಷಕರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೮ರಲ್ಲಿ `ಕೂಲಿಂಗ್ ಗ್ಲಾಸ್ ಕನಸ್ಸುಗಳು' ೨೦೨೦ರಲ್ಲಿ `ದಿಲ್ ಕಾ ದುಕಾನ' (ಕವನ ಸಂಕಲನಗಳು) ಪ್ರಕಟಿಸಿದ್ದಾರೆ. ಮತ್ತು `ಕಾವ್ಯ ಮಿತ್ರ ಪ್ರಕಾಶನದಿಂದ ರಾಜ್ಯದ ವಿವಿಧ ಲೇಖಕರ ೧೫ಕೃತಿಗಳು ಪ್ರಕಟಿಸಿದ್ದಾರೆ. ೨೦೧೮ರಲ್ಲಿ ಬೆಂಗಳೂರಿನ ಕವಿ ವೃಕ್ಷ ಬಗಳದಿಂದ ಇವರ ವಿಮರ್ಶಾ ಲೇಖನಕ್ಕೆ ಗೌರವ ಸಮ್ಮಾನ, `ಪ್ರೇತಾತ್ಮದ ಮನೆಯಲ್ಲಿ' ಪುಸ್ತಕಕ್ಕೆ `ಉತ್ತಮ ಪ್ರಕಾಶಕನೆಂಬ ಪ್ರಶಸ್ತಿ, ಕವಿವೃಕ್ಷ ಬಳಗಳವು ನೀಡಿದೆ. ಮತ್ತು ಬಸವಕಲ್ಯಾಣ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿರುವ ಇವರು ಜಿಲ್ಲೆಯ ವಿವಿಧ ಸಾಹಿತ್ಯ ಸಮ್ಮೇಳನಗಳ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ. ಬೆಳಕು ಸಂಸ್ಥೆಯು ತಮ್ಮ `ತ್ರಿವಳಿ’ ಸಾಹಿತ್ಯ ಸಮ್ಮೇಳನದಲ್ಲಿ ಇವರ ಕಾವ್ಯಮಿತ್ರ ಪ್ರಕಾಶನಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯು ನೀಡಿ ಗೌರವಿಸಿದೆ.
ಅರವಿಂದ ಚಾಂದೆ
ಸೃಜನಶೀಲ ಉದಯೋನ್ಮುಖ ಬರಹಗಾರ ಅರವಿಂದ ಚಾಂದೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದ ಶಂಕರ ಚಾಂದೆ ಮತ್ತು ಜ್ಞಾನಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೯೦ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್.ಮತ್ತು ಎಂ.ಎ.ಪತ್ರಿಕೋದ್ಯಮ, ಮತ್ತು ಸಿನಿಮಾ ನಾಟಕದಲ್ಲಿ ಡಿಪ್ಲೊಮಾ ಪದವಿ ಪಡೆದು ಬಾಹ್ಯವಾಗಿ ಪಿ.ಎಚ್.ಡಿ.ಅಧ್ಯಯನದೊಂದಿಗೆ ಬಸವಕಲ್ಯಾಣ ತಾಲೂಕಿನ ಹಾಮುನಗರದ ಹಿರಿಯ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು `ಉಲಿದ ಮೌನ', `ಚುಕ್ಕಿಯ ಚಿತ್ತಾರ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಮೈಸೂರಿನ `ಮೈಸೂರು ಧ್ವನಿ' ಎಂಬ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ರಾಜ್ಯ ಮಾಧ್ಯಮಿಕ, ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದವತಿಯಿAದ ಬೀದರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಲಭಿಸಿದೆ.
ದೇವೆಂದ್ರ ಕಟ್ಟಿಮನಿ
ಸೃಜನಶೀಲ ಉದಯೋನ್ಮುಖ ಬರಹಗಾರರೆಂದರೆ ದೇವೆಂದ್ರ ಕಟ್ಟಿಮನಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಭಾಗ ಗ್ರಾಮದ ಶ್ರೀ ಅಂಬಣ್ಣ ಮತ್ತು ಶ್ರೀಮತಿ ಕಾಶಿಬಾಯಿ ದಂಪತಿಗಳಿಗೆ ದಿನಾಂಕ ೫-೯-೧೯೮೩ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಇಡಿ. ಎಂ.ಎ. ಸ್ನಾತಕೋತ್ತರ ಪದವೀಧರರಾದ ಇವರು ರಾಯಚೂರು ಜಿಲ್ಲೆಯ ಇಡಪನೂರು ಸರ್ಕಾರಿ ಉರ್ದು ಪ್ರೌಢ ಶಾಲಾ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೨೦ರಲ್ಲಿ `ಭೀಮಾಮೃತ' (ಕವನ ಸಂಕಲನ) `ಅರಳಿ ನೆರಳು, ಸುಣ್ಣದ ಸಾಲು' (ಗಜಲ್ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೪ರಲ್ಲಿ ಕಲಬುರಗಿಯ ಡಾ.ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಲಭಿಸಿದೆ. ೨೦೧೫ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ, ೨೦೧೯ರಲ್ಲಿ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯು ಲಭಿಸಿದೆ. ಅಷ್ಟೇಯಲ್ಲದೆ ಇವರು ತಮ್ಮ ಹುಟ್ಟೂರಿನಲ್ಲಿ ಶ್ರೀಅಂಬಣ್ಣಾ ಕಟ್ಟಿಮನಿ ಸ್ಮರಣಾರ್ಥ `ಅಭಿಜ್ಞಾನ' ಪ್ರಶಸ್ತಿಯು ನೀಡಿ ಗೌರವಿಸುತ್ತಿದ್ದಾರೆ.
ಲಕ್ಷ್ಮೀಕಾಂತ ಸಿ. ಪಂಚಾಳ
ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪತ್ರಿಕೆಯ ಕುರಿತು ಸ್ಪರ್ಧಾತ್ಮಕವಾಗಿ ಕೆಲ ಕೃತಿಗಳು ಪ್ರಕಟಿಸಿದ ಲೇಖಕರೆಂದರೆ ಲಕ್ಷ್ಮೀಕಾಂತ ಸಿ. ಪಂಚಾಳ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಯಳವಂತಗಿ ಗ್ರಾಮದ ಚಂದ್ರಕಾAತ ಪಂಚಾಳ ಮತ್ತು ಸರಸ್ವತಿ ಪಂಚಾಳ ದಂಪತಿಗಳಿಗೆ ದಿನಾಂಕ ೧೬-೬-೧೯೮೪ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ, ಪ.ಪೂ,ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಬೀದರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಭಾಷೆ ಮತ್ತು ವ್ಯಾಕರಣ, ಛಂದಸ್ಸುಗಳಲ್ಲಿ ಪ್ರಾವೀಣ್ಯತೆ ಹೊಂದಿದ ಇವರು ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಅವರೊಂದಿಗೆ ಸೇರಿ `ಸರಳ ಛಂದಸ್ಸು' `ಕನ್ನಡ ಸಾಹಿತ್ಯ ಸ್ಪರ್ಧಾ ಕೈಪಿಡಿ' `ಕಡ್ಡಾಯ ಕನ್ನಡ' `ಕನ್ನಡ ಕೈ ದೀವಿಗೆ' `ಕನ್ನಡ ಕೈ ಗನ್ನಡಿ' ಎಂಬ ಸಂಪಾದಿತ ಕೃತಿಗಳು ಮತ್ತು `ಸಾಹಿತ್ಯ ದೀಪ್ತಿ’ ಎಂಬ ವಿಮರ್ಶಾ ಲೇಖನಗಳ ಕೃತಿಯು ಹೊರತಂದಿದ್ದಾರೆ. ಇವರ ಕತೆ,ಕವನ,ಲೇಖನ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಮತ್ತು ಆಕಾಶವಾಣಿಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೯ರಲ್ಲಿ ಯುವಜನೋತ್ಸವ ಬಹುಮಾನವು ಲಭಿಸಿದೆ.
ಮೇನಕಾ ಪಾಟೀಲ್
ಉದಯೋನ್ಮುಖ ಯುವ ಬರಹಗಾರ್ತಿಯಾದ ಮೇನಕಾ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ದಿ.ಶರಣಪ್ಪ ನಂದಿ ಮತ್ತು ಜೈ ಶ್ರೀ ದಂಪತಿಗಳಿಗೆ ದಿನಾಂಕ ೧೮-೮-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಮಾಧ್ಯಮದ ಪಿ.ಯು.ಸಿ (ವಿಜ್ಞಾನ)ವರೆಗೆ ಅಧ್ಯಯನ ಮಾಡಿ, ಪತ್ರಿಕೋದ್ಯಮ ಡಿಪ್ಲೊಮಾ ಪದವಿ ಪಡೆದು ಕೆಲ ವರ್ಷ ಮಂಗಳೂರಿನ `ಸ್ತ್ರೀ ಶಕ್ತಿ' ಮಾಸ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ತನ್ನ ತಂದೆಯ ಡೈರಿಯಿಂದ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ಇವರು ೨೦೧೮ರಲ್ಲಿ `ಬಸವ ರಕ್ಷಾ' (ಕವನ ಸಂಕಲನ) ೨೦೧೯ರಲ್ಲಿ ಹುಲಸೂರು ಶ್ರೀಗಳ ಕುರಿತು `ಒಂದು ಜೀವನ ಚರಿತ್ರೆ' ಎಂಬ ಕೃತಿಯು ಪ್ರಕಟಿಸಿದ್ದಾರೆ. ಮತ್ತು ಹಲವಾರು ಕವನ,ಲೇಖನ, ಹನಿಗವನಗಳು ಬರೆದಿದ್ದರಿಂದ `ಸ್ತ್ರೀ ಶಕ್ತಿ' ಪ್ರಜಾವಾಣಿ, ಉದಯವಾಣಿ, ವಿಜಯವಾಣಿ ಮತ್ತು ಬಸವ ಟಿವಿ, ಮೊದಲಾದವುಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ಬೀದರದ ಕೆಲ ಕನ್ನಡ ಪರ ಸಾಹಿತ್ಯ ಸಂಘಟನೆಯವರು ಸತ್ಕರಿ ಗೌರವಿಸಿದ್ದಾರೆ. ಮತ್ತು ಇವರು ಬೀದರದ ಜಿಲ್ಲಾ ಮಹಿಳಾ ಕಸಾಪ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಮಚ್ಚೇಂದ್ರ ಪಿ.ಅಣಕಲ್
ದಲಿತ ಬಂಡಾಯ ಕತೆಗಾರರಾಗಿ ನಾಡಿನಾದ್ಯಂತ ಪರಿಚಿತರಾದ ಸಾಹಿತಿ ಮಚ್ಚೇಂದ್ರ ಪಿ ಅಣಕಲ್. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಪಂಡಿತ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೧೨-೬-೧೯೭೯ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಇಡಿ. ಎಂ.ಎ. ಎಂ.ಇಡಿ. ಎಂ.ಎ. ಪತ್ರಿಕೊದ್ಯಮ ಪದವಿಧರರಾದ ಇವರು ೧೨ವರ್ಷ ಪೋಟೋಗ್ರಾಫರಾಗಿ ೫ವರ್ಷ ಮುಡಬಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ೪ವರ್ಷ ಮುಡಬಿ ಪಿ.ಯು.ಕಾಲೇಜಿನ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಎಪ್ರೀಲ್ ೧. ೨೦೧೬ರಿಂದ ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತುಂಬ ಆಸಕ್ತರಾಗಿ ಕತೆ, ಕವನ, ಲೇಖನ, ಬರಹಗಳು ಬರೆದು ೧೯೯೯ರಲ್ಲಿ `ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು’ (ಕವನಸಂಕಲನ) ೨೦೦೦ರಲ್ಲಿ `ಜ್ಞಾನ ಸೂರ್ಯ’ (ಸಂಪಾದಿತ ಕಾವ್ಯ) ೨೦೦೯ರಲ್ಲಿ `ಲಾಟರಿ’ ೨೦೧೧ರಲ್ಲಿ `ಮೊದಲ ಗಿರಾಕಿ’ ೨೦೧೯ರಲ್ಲಿ `ಹಗಲುಗಳ್ಳರು’ (ಕಥಾ ಸಂಕಲನಗಳು) ೨೦೧೨ರಲ್ಲಿ `ಜನಪದ ವೈದ್ಯರ ಕೈಪಿಡಿ’ (ಸಂಪಾದನೆ) ೨೦೨೦ರಲ್ಲಿ `ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ (ಅಂಕಣ) ಎಂಬ ಕೃತಿಗಳು ಪ್ರಟಿಸಿದ್ದಾರೆ. ಮತ್ತು `ಗೌರ್ಮೆಂಟ ಸರ್ವೆಂಟನ ಹೆಂಡತಿ’ (ಲಲಿತ ಪ್ರಬಂಧ) `ಇವಾ ನಮ್ಮವನಾಗಲಿಲ್ಲ’ (ಕವನಸಂಕಲನ) `ಬೀದರ ಜಿಲ್ಲೆಯ ಬಹುಮಾನಿತ ಕತೆಗಳು’ (ಸಂಪಾದನೆ) ಇತ್ಯಾದಿ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಕತೆ ಕವನ ಲೇಖನ ಪ್ರಬಂಧಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಉದಯವಾಣಿ, ತುಷಾರ, ತರಂಗ, ಕರ್ಮವೀರ ಸಂಯುಕ್ತ ಕರ್ನಾಟಕ, ಮುಂಬೈಯ ಕರ್ನಾಟಕ ಮಲ್ಲ, ಸಾಹಿತ್ಯ ಸಿಂಚನ, ಹಸಿರು ಕ್ರಾಂತಿ, ಕರ್ನಾಟಕ ಸಂಧ್ಯಾ ಕಾಲ, ಕೆಂಡ ಸಂಪಿಗೆ, ಬುಕ್ ಬ್ರಹ್ಮ ಮೊದಲಾದ ವಿದ್ಯುನ್ಮಾನ ಮಾದ್ಯಮಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿಯೂ ಅವು ಪ್ರಕಟ ಪ್ರಸಾರಗೊಂಡಿವೆ.
ಹಾಗೂ ೨೦೦೨ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ `ಲಾಟರಿ' ಕತೆ ಬಹುಮಾನ ಪಡೆದು ಪ್ರಕಟಗೊಂಡಿದೆ. .ಮತ್ತು ೨೦೧೦ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ೬ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಇವರ 'ಡಾಂಬಾರು ದಂಧೆ' ಕತೆ ಬಹುಮಾನ ಪಡೆದು 'ದೀಪಾತೊರಿದೆಡೆಗೆ' ಎಂಬ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ. ೨೦೧೨ರಲ್ಲಿ ಬೆಳಗಾವಿಯಲ್ಲಿ ನಡೆದ ೪ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇವರ `ಮೊದಲ ಗಿರಾಕಿ' ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿ ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದ ವತಿಯಿಂದ ೨೦೦೭ರಿಂದ ಪ್ರತಿವರ್ಷ ಕೊಡಲ್ಪಡುತ್ತಿರುವ ರಾಜ್ಯ ಮಟ್ಟದ ಮೊದಲ ಉರಿಲಿಂಗ ಪೆದ್ದಿ ಪ್ರಶಸ್ತಿ ಪಡೆದಿದ್ದಾರೆ. ಮತ್ತು ೨೦೦೩ರಲ್ಲಿ ಬಸವಕಲ್ಯಾಣ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ೨೦೨೦ರ ಸೆಪ್ಟೆಂಬರ ತಿಂಗಳಲ್ಲಿ ಬುಕ್ ಬ್ರಹ್ಮ ಅಂತರಜಾಲ ತಾಣವು ಏರ್ಪಡಿಸಿದ ರಾಜ್ಯ ಮಟ್ಟದ ಜನ ಮೆಚ್ಚಿದ ಪ್ರಬಂಧ ಸ್ಪರ್ಧೆಯಲ್ಲಿ ಇವರ `ಗೌರ್ಮೆಂಟ್ ಸರ್ವೇಂಟನ ಹೆಂಡ್ತಿ’ ಎಂಬ ಪ್ರಬಂಧಕ್ಕೆ ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರ ಲಭೀಸಿದೆ. ಹೀಗೆ ಹಲವಾರು ರಾಜ್ಯ ಮಟ್ಟದ ಕತೆ ಕವನ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಡಾ.ಜಯದೇವಿ ಗಾಯಕವಾಡ
ಸಾಹಿತಿ ಡಾ.ಜಯದೇವಿ ಗಾಯಕವಾಡ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧-೭-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ.ಪದವಿ ಪಡೆದು ೨೦೦೧ರಿಂದ ೨೦೦೯ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ ಹುದ್ದೆ ನಿರ್ವಹಿಸಿ, ನಂತರ ಚಿಟಗುಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಹುಮನಾಬಾದ ಕಾಲೇಜಿನ ಕನ್ನಡ ಎಂ.ಎ.ವಿಭಾಗದ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ `ಹೇಗೆ ಹೇಳಲಿ ನಾನು', `ಮರುಭೂಮಿ ಮಾಡದಿರಿ', `ಕಪ್ಪು ಹುಡುಗಿಯ ಹಾಡು' (ಕವನಸಂಕಲನಗಳು) `ಯಜ್ಣ ಸೇನಿಯ ಆತ್ಮ ಕಥನ' (ಕಾದಂಬರಿ) `ಮೂವತ್ತೊಂದು ಗಜಲ್', `ಪ್ರಜ್ಞೆ,ಶೀಲ ಕರುಣೆಯ ಗಜಲ್ ಗಳು', `ವೈಶಾಖ ಪೂರ್ಣಿಮೆಯ ಗಜಲ್ ಗಳು’, `ಚಿಂತಕರು ಮತ್ತು ಮಹಿಳೆ', `ಉರಿಲಿಂಗ ಪೆದ್ದಿ ವಚನಗಳು ವಿಶ್ಲೇಷಣೆ', `೫೦೧ ಹಾಯ್ಕುಗಳು', 'ಬೋಧಿ ವೃಕ್ಷದ ಹಾಯ್ಕುಗಳು' ಹೀಗೆ ಸುಮಾರು ೨೭ಕ್ಕೂ ಹೆಚ್ಚು ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಬೆಂಗಳೂರಿನ ಕಸಾಪದ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಅಮ್ಮಾ ಪ್ರಶಸ್ತಿ, ರಮಾಬಾಯಿ, ಅಂಬೇಡ್ಕರ್ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭೀಸಿದ್ದು, ಬಸವಕಲ್ಯಾಣ ತಾಲೂಕಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹುಮನಾಬಾದ ತಾಲೂಕು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಹಾಗೂ ಬೇಲೂರಿನ ಉರಿಲಿಂಗ ಪೆದ್ದಿ ಮಠದಲ್ಲಿ ನಡೆದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರ ಬರಹ ಭಾಷಣಗಳು ಅನೇಕ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗೃಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಾಹಿಸಿದ್ದಾರೆ.
ಈಶ್ವರ ತಡೋಳಾ
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರ ತಡೋಳಾ ರವರು ಸಾಹಿತಿಯಾಗಿ ಉತ್ತಮ ಬರಹಗಳನ್ನು ಬರೆಯುತ್ತಿದ್ದಾರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಚಂದ್ರಪ್ಪಾ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಂದು ಜನಿಸಿದ್ದು, ಡಿ,ಎಂ,ಎಲ್.ಟಿ. ಮತ್ತು ಎಂ,ಎ,ಸ್ನಾತಕೋತ್ತರ ಪದವಿಧರರಾಗಿ ಕೆಲವರ್ಷ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ, ನಂತರ ೨೦೦೩ರಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ಟೆಕ್ನಾಲಜಿಸ್ಟ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಸಮತೆಯ ಹಾಡು', `ಕಾವ್ಯ ಚೇತನ’ (ಕವನ ಸಂಕಲನ) `ಸಮರಸ ಜೀವಿ', `ನುಡಿ ಬೆಳಕು' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಬರೆದ ಕವಿತೆಗಳು ನಾಡಿನ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಲ್ಲಿ ಅವು ಪ್ರಕಟವಾಗಿವೆ. ಇವರು ಮೈಸೂರು ದಸರಾ ಕವಿಗೊಷ್ಠಿ ಸೇರಿದಂತೆ ನಾಡಿನ ವಿವಿಧ ಕಡೆ ಕವನವಾಚನ ಮಾಡಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಮೊದಲ ಕವನ ಸಂಕಲನ `ಸಮತೆಯ ಹಾಡು' ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅನುದಾನ ಪಡೆದು ಪ್ರಕಟವಾಗಿದೆ.
ವೀರಣ್ಣ ಮಂಠಾಳಕರ್
ಎರಡು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ಲೇಖಕ ವೀರಣ್ಣ ಮಂಠಾಳಕರ್ ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ವೈಜಿನಾಥ ಹಾಗೂ ಶರಣಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿವರೆಗೆ ಓದಿದ ಇವರು ಕೆಲವರ್ಷ ಬೆಂಗಳೂರಿನ ನಂದಿನಿ ಹಾಲಿನ ಡೈರಿಯಲ್ಲಿ ಸೇವೆ ಸಲ್ಲಿಸಿ, ನಂತರ ದಿಕ್ಸೂಚಿ ಪತ್ರಿಕೆಯ ಪ್ರೂಫ್ ರೀಡರ್ ಆಗಿ ಬಸವಕಲ್ಯಾಣದ ಕನ್ನಡ ಪ್ರಭ, ವಿಜಯ ಕರ್ನಾಟಕ ವರದಿಗಾರರಾಗಿ `ಸಂಕಲ್ಪ’ ಮಾಸಿಕದ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿ, ಸದ್ಯ ವೀರ ಸಂಕಲ್ಪ ಯು ಟ್ಯೂಬ್‌ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು `ಭಾವಾಂತರAಗ’ (ಚುಟುಕು ಸಂಕಲನ) `ಗಾಂಧಿ ಆಗ್ಬೇಕಂದುಕೊAಡಾಗ’, `ಕಾಯುವ ದೇವರ ವರ’ (ಕವನ ಸಂಕಲನಗಳು) `ಬದುಕಿನ ಬೆನ್ನೇರಿ’ (ಕಥಾಸಂಕಲನ) `ಸುಳಿಗಳು’ (ಹನಿಗವನ ಸಂಕಲನ) `ಮಾಧ್ಯಮದೊಳಗಣ’ (ಅಂಕಣ ಬರಹ) `ಗಜಲ್ ಗೆಜ್ಜೆನಾದ’ (ಗಜಲ್ ಸಂಕಲನ) `ಮೌನ ಪ್ರತಿಭೆ’ (ವ್ಯಕ್ತಿ ಪರಿಚಯ) ಎಂಬ ಕೃತಿಗಳು ಬರೆದು ಪ್ರಕಟಿಸಿದ್ದಾರೆ.
ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಮೈಸೂರಿನ ೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿರುವ ಇವರಿಗೆ ಮೇ ೮, ೨೦೧೯ರಂದು ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಜರುಗಿದ ಬಸವಕಲ್ಯಾಣ ತಾಲೂಕಾ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಮತ್ತು ೨೦೧೯ರಲ್ಲಿ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನ ರತ್ನ’ ಪ್ರಶಸ್ತಿಯು ನೀಡಲಾಗಿದೆ.
ದಿ. ಕವಿತಾ ಮಲ್ಲಪ್ಪ
ಕಾವ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿ ಕೆಲ ಕೃತಿಗಳು ರಚಿಸಿದ ಕವಯತ್ರಿಯೆಂದರೆ ದಿ.ಕವಿತಾ ಮಲ್ಲಪ್ಪ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರದವರು. ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧-೧-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.,ಬಿ.ಇಡಿ ಪದವಿಧರರಾದ ಇವರು ಗ್ರಾಂ.ಪA. ಕಾರ್ಯದರ್ಶಿಯಾಗಿ ಸೇವೆಗೆ ಸೇರಿ ಕೆಲ ವರ್ಷ ರಾಯಚೂರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಂತರ ಔರಾಧ ತಾಲೂಕಿನ ಚಿಂತಾಕಿ ಮತ್ತು ಬಸವಕಲ್ಯಾಣದ ತಡೋಳ ಗ್ರಾಮ ಪಂಚಾಯಿತನಲ್ಲಿ ಸೇವೆ ಸಲ್ಲಿಸುತ್ತಿರುವಾಗ ೨೦೧೨ರಲ್ಲಿ ಇಹಲೋಕ ತ್ಯಜಿಸಿರುವುದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರು `ಸಾಹಿತ್ಯ ಸಂಪ್ರೀತಿ', `ದಲಿತ ಸಾಹಿತ್ಯ ಪಿತಾಮಹ ಬಿ.ಶ್ಯಾಮಸುಂದರ ಜೀವನ ಚರಿತ್ರೆ', `ಪ್ರಜಾಧ್ವನಿ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಸಾಹಿತ್ಯ ಸಂಪ್ರೀತಿ’ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಧನಸಹಾಯ ಪಡೆದು ಪ್ರಕಟವಾಗಿದೆ. ಮತ್ತು ಇವರ ಬರಹಗಳು ನಾಡಿನ ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ದೆಹಲಿಯ ದಲಿತ ಸಾಹಿತ್ಯ ಅಕಾದೆಮಿಯ ವತಿಯಿಂದ ಡಾ.ಅಂಬೇಡ್ಕರ್ ಪ್ರಶಸ್ತಿ, ಬಸವಕಲ್ಯಾಣದ ಲೋಹಿಯಾ ಪ್ರತಿಷ್ಠಾನದ ಶ್ಯಾಮಸುಂದರ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಮಾಣಿಕ ಆರ್.ಭುರೆ
ಸಾಹಿತಿ ಹಾಗೂ ಪತ್ರಕರ್ತರಾಗಿ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಮಾಣಿಕ ಆರ್ ಭುರೆ. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದ ರಾಮ ಭುರೆ ಮತ್ತು ಸಂಪತಾಬಾಯಿ ದಂಪತಿಗಳಿಗೆ ದಿನಾಂಕ ೧೩-೧೦-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ಬಸವಕಲ್ಯಾಣದ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೦೩ರಲ್ಲಿ `ಶರಣ ಸಂಸ್ಕçತಿ ದರ್ಶನ’ ೨೦೦೮ರಲ್ಲಿ `ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು' ೨೦೧೦ರಲ್ಲಿ `ದಲಿತ ಪೀಠಾಧಿಪತಿ' ಎಂಬ ೨೦೧೫ರಲ್ಲಿ `ಹುಲಸೂರು ತಾಲೂಕು ದರ್ಶನ’ ೨೦೧೮ರಲ್ಲಿ `ಸಂಗೀತ ರತ್ನ ವಿರೂಪಾಕ್ಷಯ್ಯ ಗೋರ್ಟಾ’ ೨೦೧೯ರಲ್ಲಿ `ಚಾಲುಕ್ಯ ನಾಡು' ಎಂಬ ಕೃತಿಗಳು ಪ್ರಕಟಿಸಿ, ಹಾರಕೂಡದ ಪೂಜ್ಯ..ಶ್ರೀ.ಡಾ.ಚನ್ನವೀರ ಶಿವಾಚಾರ್ಯರ ಕುರಿತು `ನುಡಿಚೆನ್ನ' ಎಂಬ ಅಭಿನಂದನಾ ಗ್ರಂಥವು ಸಂಪಾದಿಸಿದ್ದಾರೆ ಇವರ `ದಲಿತ ಪೀಠಾಧಿಪತಿ’ ಕೃತಿಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಿಂದ `ಜಿ.ಆರ್.ರೇವಯ್ಯ’ ದತ್ತಿ ಪ್ರಶಸ್ತಿ ದೊರಕಿದೆ.
ಕಾಲೇಜು ದಿನಗಳಲ್ಲಿಯೇ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಇವರು ೧೯೯೩ರಲ್ಲಿ `ಉತ್ತರ ಕರ್ನಾಟಕ' ೧೯೯೫ರಲ್ಲಿ `ಬಹಿರಂಗ ಸುದ್ದಿ' `ಜನಬೆಂಬಲ' ೧೯೯೬ರಲ್ಲಿ `ಬಿಸಿಲ ಬದುಕು' ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿ ೧೯೯೭ರಲ್ಲಿ `ಪ್ರಜಾವಾಣಿ' ವರದಿಗಾರರಾಗಿ ಸೇವೆಗೆ ಸೇರಿ ೨೭ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಬಸವಕಲ್ಯಾಣ ತಾಲ್ಲೂಕಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಪ್ರಥಮ ತಾಲ್ಲೂಕು ಜಾನಪದ ಸಮ್ಮೇಳನ ಹಾಗೂ ೩ ರಾಷ್ಟ್ರೀಯ ಜಾನಪದ ಉತ್ಸವಗಳನ್ನು ಆಯೋಜಿಸಿದ್ದರು. ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಕಸಾಪದ ಜಿಲ್ಲಾ ಪ್ರತಿನಿಧಿ, ತಾಲ್ಲೂಕು ಕಾರ್ಯದರ್ಶಿ, ಗಡಿನಾಡು ಪ್ರತಿನಿಧಿ ಆಗಿ ಸೇವೆ ಸಲ್ಲಿಸಿದ್ದಾರೆ.
ಡಾ.ರವೀಂದ್ರನಾಥ ನಾರಾಯಣಪುರ
ಸಾಹಿತಿಗಳಾದ ಡಾ.ರವೀಂದ್ರನಾಥ ನಾರಾಯಣಪುರ ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರದ ಗುರಪ್ಪ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧೫-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ವಿ.ಎಸ್.ಸಿ, ಎಂ.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದ ಇವರು ೧೯೯೩ರಲ್ಲಿ ಬಸವಕಲ್ಯಾಣದ ಪಶುಪಾಲನ ಇಲಾಖೆಯ ಪಶುವೈಧ್ಯಾಧಿಕಾರಿಯಾಗಿ ಸೇವೆಗೆ ಸೇರಿ ಕೆಲವರ್ಷಗಳ ನಂತರ ಈಗ ಪ್ರಭಾರಿ ಸಹಾಯಕ ನಿರ್ದೇಶಕರಾಗಿ ಹುಮನಾಬಾದಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿರುವ ಇವರು ೨೦೧೦ರಲ್ಲಿ ಸಾಹಿತಿ ಓಂ ಪ್ರಕಾಶ ದಡ್ಡೆಯವರ ಕುರಿತು `ಗೀತೋಪಾಸಕ' ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ೧೯೯೫ರಲ್ಲಿ ಇವರು ಉತ್ತರ ಪ್ರದೇಶದಲ್ಲಿ ಐವಿಆರ್‌ವಿ ಕನ್ನಡ ಸಂಘವು ಕಟ್ಟಿ ಅಲ್ಲಿಯ ಕನ್ನಡಿಗರಿಗೆ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಮತ್ತು ವೈದ್ಯರಾಗಿ ಸಾಹಿತ್ಯ ಸೇವೆಯನ್ನು ಮಾಡಿರುವುದರಿಂದ ೨೦೧೩ರಲ್ಲಿ ಬೆಂಗಳೂರಿನ ಹೆಗಡೆ ಕಲ್ಚರಲ್ ಆ್ಯಂಡ್ ಸೋಶಿಯಲ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ೨೦೧೯ರಲ್ಲಿ ಬಸವಕಲ್ಯಾಣ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನರತ್ನ’ ಪ್ರಶಸ್ತಿ, ಸುರಪುರ ತಾಲೂಕಿನ ತಿಂಥಣಿಯಿAದ ಪ್ರಕಟವಾಗುವ ಕನಕ, ಕನಕಲೋಕ, ಕನಕಸುಧಾ ಎಂಬ ಪತ್ರಿಕೆಗಳಿಗೆ ಹವ್ಯಾಸಿ ವರದಿಗಾರರಾಗಿ ಸೇವೆ ಸಲ್ಲಿಸಿದರಿಂದ ಆ ಪತ್ರಿಕಾ ಸಮೂಹ ಸಂಸ್ಥೆಯಿAದ ಸತ್ಕರಿಸಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)














