ಭಾನುವಾರ, ಜನವರಿ 12, 2025
ಪೂಜ್ಯ ಶ್ರೀ.ಅಕ್ಕ ಅನ್ನಪೂರ್ಣ ತಾಯಿ
ಬಸವ ತತ್ವ ಮತ್ತು ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಹಿತಿ ಪೂಜ್ಯ. ಶ್ರೀ. ಅಕ್ಕ ಅನ್ನಪೂರ್ಣ ತಾಯಿಯವರು. ಬೀದರದ ಹಾರೂರಗೇರಿಯ ಬಂಡೆಪ್ಪಾ ಮತ್ತು ಸೂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಎಲ್.ಎಲ್.ಬಿ.ಪದವಿಧರರಾದ ಇವರು ಕೆಲವರ್ಷ ಶ್ರೀ ಶಿವಕುಮಾರೇಶ್ವರ ಗುರುಕುಲದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಂತರ ಸರ್ಕಾರಿ ಶಿಕ್ಷಕ ಹುದ್ದೆಗೆ ಸೇರ್ಪಡೆಯಾಗಿ ನಂತರ ವೈರಾಗ್ಯ ತಾಳಿ ಶಿಕ್ಷಕ ಹುದ್ದೆ ತೊರೆದು ೧೯೮೬ರಲ್ಲಿ ಬಸವ ದಳದ ಸಂಘಟನೆ ಸೇರಿ ಬಸವ ಧರ್ಮ ಮತ್ತು ಶರಣತತ್ವ ಪ್ರಸಾರದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ `ಮಹಾ ಮಹಿಮಾ ಸಂಗನ ಬಸವಣ್ಣ, (ನಾಟಕ) ದೇವನೆಡೆಗೆ, ಸುಖ ಯಾವುದು ? ಬಸವಾಜ್ಞೆ, ಭಕ್ತ, ಇಷ್ಟ ಲಿಂಗ ಪೂಜಾ ವಿಧಾನ, ಮಹೇಶ ಸ್ಥಳ, ನಿಷ್ಪತ್ತಿ, ಮಹಿಳೆ ಲೋಕಾಯುಕ್ತವಾದಾಗ (ರೇಡಿಯೋ ನಾಟಕಗಳು) ಭಕ್ತಿ ಗೀತೆಗಳು ' ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು `ಶ್ರೀ ಗುರು ಬಸವೇಶ್ವರ ಪೂಜಾ ವೃತ್ತ' ಮತ್ತು `ವಚನ ಜೀವನ' ಎಂಬ ಕೃತಿಗಳು ಅವರು ಮರಾಠಿಗೆ ಅನುವಾದಿಸಿದ್ದಾರೆ. ಹಾಗೂ `ಬಸವ ಸಂಪದ ಭಾಗ -೧.೨. ಚನ್ನ ಸಂಪದ, ಅಕ್ಕನ ಸಂಪದ, ಪ್ರಭು ಸಂಪದ, ಮಾಚಿದೇವ, ಸಿದ್ದ, ಶಿವ ಶರಣೆಯರು, ಅಂಬಿಗರ ಚೌಡಯ್ಯ ಸಂಪದಗಳು, ಬಸವ ಸಂದೇಶ, ಲಿಂಗಾಯತ ಧರ್ಮ ಗೃಂಥ ಗುರು ವಚನ, ಯೋಗಿನಾಥ ತ್ರಿವಿಧಿ, ಗುರು ಕರುಣ ತ್ರಿವಿಧಿ, ಪ್ರಾರ್ಥನೆ, ಇಷ್ಟ ಲಿಂಗ ಪೂಜಾ ವಿಧಾನ, ಮಹಾದೇವಿಯಕ್ಕಂಗಳ ಸಮಗ್ರ ಸಾಹಿತ್ಯ, ಜನಪದರು ಕಂಡ ಶರಣರು, ಇತ್ಯಾದಿ ಕೃತಿಗಳು ಸಂಪಾದಿಸಿದ್ದಾರೆ. ಅಷ್ಟೇಯಲ್ಲದೆ `ಎದ್ದೇಳಿ ಬಂಧುಗಳೆ ಎಚ್ಚರಾಗಿ, ನಾವೇಲ್ಲ ಒಂದೇ, ಶರಣರು ಉದಿಸಿ ಬಂದ ನಾಡಲ್ಲಿ, ವಚನ ಸಾಹಿತ್ಯ ನಮ್ಮದು, ನಡೆಯಿರಿ ಸಾಗಿರಿ ಬಸವ ದಳದ ವೀರರೇ' ಎಂಬ ಬೀದಿ ನಾಟಕಗಳು ರಚಿಸಿ ನಿರ್ದೇಶಿಸಿದ್ದಾರೆ. ಇವರು ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮತ್ತು ಆಸ್ಟ್ರೇಲಿಯಾದ ಸಿಡ್ನಿ ಅಮೆರಿಕಾದ ಕ್ಯಾಲಿಫೋರ್ನಿಯಾ ಮೊದಲಾದ ವಿದೇಶಗಳಲ್ಲಿ ಬಸವ ತತ್ವ ಪ್ರಸಾರ ಮಾಡಿದ್ದಾರೆ. ೨೦೧೧ರಲ್ಲಿ ನೀಲಮ್ಮನ ಬಳಗ ಸ್ಥಾಪಿಸಿದ ಇವರು ಪ್ರತಿ ಹುಣ್ಣಿಮೆಗೆ ಶರಣ ಸಂಗಮ, ಪ್ರತಿ ಭಾನುವಾರ ವ್ಯಕ್ತಿ ಕಲ್ಯಾಣ ಲೋಕ ಕಾರ್ಯಕ್ರಮ ನಡೆಸುವರು. ಮತ್ತು ಬೀದರದ ಪಾಪನಾಶದ ಹಿಂದುಗಡೆ ೧೦ ಎಕರೆ ಪ್ರದೇಶದಲ್ಲಿ ಬಸವಗಿರಿಯನ್ನು ಸ್ಥಾಪಿಸಿ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇವರ ಪ್ರವಚನಗಳು ರಮೇಶ ಸ್ವಾಮಿ ಕನಕಟ್ಟಾ ರವರು ೮ ಕೃತಿಗಳಲ್ಲಿ ಹೊರತಂದಿದ್ದಾರೆ. ಇವರು ೬ ಧ್ವನಿ ಸುರುಳಿಗಳು ಹೊರ ತಂದಿದ್ದು, ಅವರ ಚಿಂತನೆಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಮತ್ತು ಇವರು ತಮ್ಮ ಸೇವಾಶ್ರಮದಲ್ಲಿ ೧೯೯೮ರಲ್ಲಿ ಜಯದೇವಿ ತಾಯಿ ಲಿಗಾಡೆಯವರ ಹೆಸರಿನಲ್ಲಿ ಗ್ರಂಥಾಲಯವು ಸ್ಥಾಪಿಸಿದ್ದಾರೆ. ಅಷ್ಟೇಯಲ್ಲದೆ ೨೦೧೧ರಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ಸಾಧಕರಿಗೆ `ಗುರು ಬಸವ ಪುರಸ್ಕಾರ' ನೀಡಿ ಗೌರವಿಸುತ್ತಿದ್ದಾರೆ. ಮತ್ತು ೨೦೧೪ರಿಂದ ವೀರಮಾತೆ ಅಕ್ಕ ನಾಗಮ್ಮ ಪ್ರಶಸ್ತಿಯು ನೀಡುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಶ್ರದ್ಧಾ ಕೇಂದ್ರ ಬಸವಗಿರಿಯಲ್ಲಿ ತಾತ್ವಿಕ ಗುರು ವಚನ ಪರುಷ ಕಟ್ಟೆಯನ್ನು ಸ್ಥಾಪಿಸಿದ ಇವರು ಬಸವ ತತ್ವ ಧಾರ್ಮಿಕ ಚಟುವಟಿಕೆಯೊಂದಿಗೆ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ