ಪುಟಗಳು

ಭಾನುವಾರ, ಜನವರಿ 12, 2025

ಶಿವಕುಮಾರ ನಾಗವಾರ

ಕತೆಗಾರ ಶಿವಕುಮಾರ ನಾಗವಾರ. ಇವರು ಬೀದರ ತಾಲೂಕಿನ ಮರಕುಂದಾ ಗ್ರಾಮದ ಮಡಿವಾಳಯ್ಯ ಮತ್ತು ಕಾಶೆಮ್ಮ ದಂಪತಿಗಳಿಗೆ ದಿನಾಂಕ ೧೨-೮-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಡಿ.ಫಾರ್ಮ ಸ್ನಾತಕೋತ್ತರ ಪದವಿ ಪಡೆದು ಬೀದರದ ಕಾಶಿನಾಥರಾವ ಬೆಲೂರೆ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಹಣದಿ', `ಏಳೂರ ಸರಪಂಚ', `ಮನಸ್ಸು ಮಾತಾಡಿದಾಗ' (ಕಥಾಸಂಕಲನಗಳು) `ಚೆನ್ನಬಸವಣ್ಣನವರು' (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಹಲವು ಕತೆಗಳು ರಾಜ್ಯ ಮಟ್ಟದ ಕಥಾಸ್ವರ್ಧೆಯಲ್ಲಿ ಬಹುಮಾನಗಳು ಪಡೆದು ಹೆಸರುವಾಸಿಯಾಗಿವೆ. ಅವುಗಳೆಂದರೆ,೧೯೮೭ ರಲ್ಲಿ ತರಂಗ ಕಥಾ ಸ್ಪರ್ಧೆಯಲ್ಲಿ ಇವರ `ಬನ್ಯಾ' ಕತೆ, `೧೯೯೪ರಲ್ಲಿ ಉತ್ಥಾನ ಮಾಸಪತ್ರಿಕೆಯಲ್ಲಿ `ಹಗಲುಗಳಾಗಿ ರಾತ್ರಿಗಳು' ಮತ್ತು ಅದೆ ಪತ್ರಿಕೆಯು ೧೯೯೬ರಲ್ಲಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಹುಳುಚು' ಎಂಬ ಕತೆ. ಹಾಗೂ ೨೦೦೨ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯವರ ತಿಂಗಳ ಕಥಾ ಸ್ಪರ್ಧೆಯಲ್ಲಿ `ಹಡದಿ' ಕತೆ ಇವುಗಳು ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರೆ, ೧೯೯೫ರಲ್ಲಿ ಉತ್ಥಾನ ಮಾಸಪತ್ರಿಕೆಯವರು ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ `ಬಾಬಡಿ' ಎಂಬ ಕತೆ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ೧೯೮೮ರಲ್ಲಿ ಪ್ರಜಾವಾಣಿಯ ಕಥಾ ಸ್ಪರ್ಧೆಯಲ್ಲಿ `ಟುಮ್ಯಾ' ಮತ್ತು ೧೯೯೭ರಲ್ಲಿ `ನೆಲ ಹಿಡಿಯುವ ಮುನ್ನ' ಕತೆಗಳು ಬಹುಮಾನ ಪಡೆದು ಪ್ರಕಟವಾಗಿವೆ. ೧೯೯೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಏರ್ಪಡಿಸಿದ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಸತ್ಯ' ಕತೆ ಬಹುಮಾನ ಪಡೆದಿದೆ. ಮತ್ತು ೨೦೦೦ ರಲ್ಲಿ ಇವರ `ಹಣದಿ' ಕಥಾಸಂಕಲನಕ್ಕೆ ಉದಯವಾಣಿ ಪತ್ರಿಕೆಯವರಿಂದ ಪುಸ್ತಕ ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಇವರ `ಏಳೂರು ಸರಪಂಚ' ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ, ೨೦೦೯ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಮನಸ್ಸು `ಮಾತಾಡಿದಾಗ ' ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ೨೦೦೩ರಲ್ಲಿ ಇವರ `ಹಗಲುಗಳಾಗಿ ರಾತ್ರಿಗಳು' ಎಂಬ ಕತೆ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಮತ್ತು `ಹರಿದ ಕಾಗದದ ಚೂರುಗಳು' ಎಂಬ ಕತೆ ಬಿ.ಬಿ.ಎಂ.ವಿದ್ಯಾರ್ಥಿಗಳಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪಠ್ಯ ಪುಸ್ತಕಗಳಾಗಿವೆ. ಮತ್ತು ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೨೦೧೪-೧೫ನೇ ಸಾಲಿನ ಪಿ.ಯು.ಸಿ.ದ್ವಿತೀಯ ವರ್ಷದ ಕನ್ನಡ ಪಠ್ಯಕ್ರಮದ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯು ಇವರು ೨೦೧೪ರಿಂದ ೨೦೧೭ ರವರೆಗೆ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ತಮ್ಮ ಹುಟ್ಟೂರಿನಲ್ಲಿ ಚಾಲುಕ್ಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ