ಶುಕ್ರವಾರ, ಜನವರಿ 10, 2025
ದಿ. ಶ್ರೀಕಾಂತ ಪಾಟೀಲ್
ಗ್ರಾಮೀಣ ಸೋಗಡಿನ ಕತೆಗಳು ಬರೆದು ನಾಡಿನಾದ್ಯಂತ ಚಿರಪರಿಚಿತರಾದ ಕತೆಗಾರರೆಂದರೆ ಶ್ರೀಕಾಂತ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ವೀರಪ್ಪಾ ಪೋಲಿಸ್ ಪಾಟೀಲ್ ಮತ್ತು ನಿಜಗುಣ ಪೋಲಿಸ್ ಪಾಟೀಲ್ ದಂಪತಿಗಳಿಗೆ ದಿನಾಂಕ ೧೭-೭-೧೯೫೯ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಅಗ್ರಿಕಲ್ಚರ್ ಪದವಿ ಪಡೆದು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆಗೆ ಸೇರಿದ ಇವರು ೧೯೯೭ರಲ್ಲಿ `ಬೆಂಕಿ ಮರೆಯ ತಂಪು' (ಕಥಾ ಸಂಕಲನ) `ಸರಣಿ ಕಥೆಗಳು' (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ.
ಇವರು ಬರೆದವುಗಳಲ್ಲಿ `ಹಕ್ಕಲ ಸೆಂಗಾ' `ಮಣ್ಣು’ `ಜರ್ದಾರಿ ರುಮಾಲು' `ಸಂಬAಧ' `ಮೂಡಲದಾಗ ಕೆಂಪ ರಾಶಿ ಮೂಡಿತ್ತು' `ಸಾಲ' `ಗಟ್ಟಿ ಎಳೆ' `ಧರ್ಮ ಬೆಲಿ ಬದುಕು' `ದಾರಿ' `ಚಿತ್ತಿಗಳು' `ಬೆಂಕಿ ಮರೆಯ ತಂಪು' `ಭೂಮಿ ತಾಯಿ ಮುಣದಾಳ’ ಎಂಬ ಕತೆಗಳು ಪ್ರಮುಖವಾಗಿವೆ. `ಭೂಮಿ ತಾಯಿ ಮುಣದಾಳ’ ಕತೆ ೧೯೯೮ರಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ತೃತಿಯ ಬಹುಮಾನ ಪಡೆದರೆ, `ಬೆಂಕಿ ಮರೆಯ ತಂಪು' ೨೦೦೨ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ. ೧೯೯೧ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ರಾಜಪುರೋಹಿತರ ದತ್ತಿ ಕಥಾ ಸ್ಪರ್ಧೆಯಲ್ಲಿ ಇವರ `ಜರ್ದಾರಿ ರುಮಾಲು' ಕತೆ ಪ್ರಥಮ ಸ್ಥಾನ ಪಡೆದಿದೆ. ಮತ್ತು ೧೯೯೩ರಲ್ಲಿ ಇದೇ ಕಥಾ ಸ್ಪರ್ಧೆಯಲ್ಲಿ `ಮೂಡಲದಾಗ ಕೆಂಪು ರಾಶಿ ಮೂಡಿತ್ತು' ಎನ್ನುವ ಕತೆಗೆ `ಅತ್ಯುತ್ತಮ ಕತೆ' ಎಂಬ ಪುರಸ್ಕಾರ ಪಡೆದುಕೊಂಡಿದೆ.
೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದ ಅಮರೇಶ್ವರ ನುಗಡೋಣಿಯವರು ಸಂಪಾದಿಸಿದ ಹೈದರಾಬಾದ್ ಕರ್ನಾಟಕ ಲೇಖಕರ ಪ್ರಾತಿನಿಧಿಕ ಕಥಾಸಂಕಲನ `ಬಿಸಿಲ ಹನಿಗಳು' ಎಂಬ ಪುಸ್ತಕದಲ್ಲಿ ಇವರದೊಂದು ಕತೆಯು ಪ್ರಕಟವಾಗಿದೆ. ೨೦೦೨ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕನ್ನಡ ಐಚ್ಛಿಕ ವಿಷಯದಲ್ಲಿ ಇವರ `ಸಾಲ' ಎಂಬ ಕತೆ ಪಠ್ಯವಾಗಿತ್ತು. ಇವರ ಕತೆಗಳು ತುಷಾರ, ಸುಧಾ,ಪ್ರಜಾವಾಣಿ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಮತ್ತು ಕಲಬುರಗಿ ಆಕಾಶವಾಣಿಯಿಂದ ಅವು ರೇಡಿಯೋ ನಾಟಕ ರೂಪಾಂತರವಾಗಿಯೂ ಪ್ರಸಾರವಾಗಿವೆ. ಇವರ ಸಾಹಿತ್ಯ ಸೇವೆ ಪರಿಗಣಿಸಿ ೨೦೦೨ ರಲ್ಲಿ ಕರ್ನಾಟಕ ಸರ್ಕಾರವು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಿತ್ತು. ದುರಾದೃಷ್ಟವೆಂದರೆ ಇವರು ೨೦೦೪ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದಿನಾಂಕ ೫-೧-೨೦೦೪ರಲ್ಲಿ ಇಹಲೋಕ ತ್ಯಜಿಸಿದರಿಂದ ಕನ್ನಡ ಕಥಾ ಸಾಹಿತ್ಯದ ಕೊಂಡಿಯೊAದು ಕಳಚಿದಂತಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ