ಶುಕ್ರವಾರ, ಜನವರಿ 10, 2025
ಜಿ.ಎಸ್.ಮಾಲಿ ಪಾಟೀಲ್
ಸಾಹಿತ್ಯ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡು ಪುಸ್ತಕ ಪ್ರಕಟಿಸಿದ ಕವಿ, ಸಾಹಿತಿಯೆಂದರೆ, ಜಿ. ಎಸ್. ಮಾಲಿ ಪಾಟೀಲ್. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಸಿರಗಾಪುರ ಗ್ರಾಮದ ಸಿದ್ರಾಮಪ್ಪ ಮಾಲಿ ಪಾಟೀಲ್ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಸ್ನಾತಕೋತ್ತರ ಪದವಿಧರರಾದ ಇವರು ೧೯೯೦ರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾಗಿ ಸೇವೆಗೆ ಸೇರಿ ಆಳಂದ ತಾಲೂಕಿನ ವಿ. ಕೆ. ಸಲಗರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೧೯೯೯ರಲ್ಲಿ `ಒಳ ದನಿ' ಎಂಬ ಕವನ ಸಂಕಲನವು ಪ್ರಕಟಸಿದ್ದಾರೆ. ಇವರ ಕವನ, ಲೇಖನ, ಚಿಂತನ ಬರಹಗಳು `ಸಾಹಿತ್ಯ ಸಾರಥಿ' ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಕಲಬುರಗಿ ಆಕಾಶವಾಣಿಯಲ್ಲಿಯೂ ಪ್ರಕಟ, ಪ್ರಸಾರವಾಗಿವೆ. ಹಾಗೂ ಹಾರಕೂಡ ಶ್ರೀಗಳ `ನುಡಿ ಚನ್ನ' ಅಭಿನಂದನಾ ಗ್ರಂಥ ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಸಾಹಿತ್ಯದೊಂದಿಗೆ ಸಂಘಟನಾ ಚಾತುರ್ಯತೆಯು ಹೊಂದಿದ ಇವರು ಕನ್ನಡ ಭಾಷೆ, ನಾಡು- ನುಡಿಗಾಗಿ ಸಾಕಷ್ಟು ದುಡಿದಿದ್ದಾರೆ. ೧೯೯೬-ರಿಂದ ೧೯೯೮ರ ವರೆಗೆ ಆಳಂದ ತಾಲೂಕಾ ಕಸಾಪ ಅಧ್ಯಕ್ಷರಾಗಿ, ೧೯೯೯ರಿಂದ ೨೦೦೧ರವರೆಗೆ ಕಸಾಪ ಅಧ್ಯಕ್ಷರಾಗಿ, ೨೦೧೩ರಿಂದ ೨೦೧೫ರ ವರೆಗೆ ಕಲಬುರಗಿ ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಇದಕ್ಕೂ ಮೊದಲು ೧೯೯೨ರಿಂದ ೨೦೦೪ರ ವರೆಗೆ ರಾಷ್ಟ್ರೀಯ ಬಸವ ಕೇಂದ್ರ, ಮತ್ತು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ ಆಳಂದ ಪತ್ರಕರ್ತರಾಗಿ ಸೇವೆ ಸಲ್ಲಿಸಿ ೨೦೧೦ ರಿಂದ ೨೦೧೪ರ ವರೆಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ `ಮಹಾಂತ ಜ್ಯೋತಿ ಪ್ರಶಸ್ತಿ’ `ಕರ್ನಾಟಕ ಚೇತನ ಪ್ರಶಸ್ತಿ’ `ಜನಪ್ರಿಯ ಶಿಕ್ಷಕ ಪ್ರಶಸ್ತಿ’ `ಸೇವಾ ರತ್ನ ಪ್ರಶಸ್ತಿ’ `ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಖಜೂರಿ, ಹಾರಕೂಡ, ನರೋಣ ಇತ್ಯಾದಿ ಶ್ರೀಗಳಿಂದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿ ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ