ಪುಟಗಳು

ಶುಕ್ರವಾರ, ಜನವರಿ 10, 2025

ವಿರೂಪಾಕ್ಷಯ್ಯ ಸಿದ್ರಾಮಯ್ಯ ಸ್ವಾಮಿ

ಹಿರಿಯ ಸಾಹಿತಿ ವಿರೂಪಾಕ್ಷಯ್ಯ ಸ್ವಾಮಿ ಗೋರ್ಟಾ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಸಿದ್ದರಾಮಯ್ಯ ಮತ್ತು ಕಾಶೆಮ್ಮ ದಂಪತಿಗಳಿಗೆ ದಿನಾಂಕ ೧೯-೮-೧೯೨೬ರಲ್ಲಿ ಜನಿಸಿದ್ದಾರೆ. ನಾಲ್ಕನೇ ತರಗತಿಯವರೆಗೆ ಅಧ್ಯಯನ ಮಾಡಿದ ಇವರು ವೇದಗಾಯಕ, ಸಾಂಸ್ಕೃತಿಕ ಹಾಗೂ ಸ್ವತಂತ್ರ ಹೋರಾಟಗಾರರಾಗಿ ಅಧ್ಯಾತ್ಮಿಕ, ಸಾಹಿತ್ಯಕ ಕ್ಷೇತ್ರದಲ್ಲಿ ಒಲವು ಮೂಡಿಸಿಕೊಂಡು ಸಂಗೀತಗಾರಾಗಿ ಜಾನಪದ, ಕಥನ ಗೀತೆಗಳು ಬರೆದು ಗ್ರಾಮದ ಮತ್ತೊರ್ವ ಸಮಕಾಲಿನ ಸಾಹಿತಿ ವಿರೂಪಾಕ್ಷಯ್ಯ ಸ್ವಾಮಿಯವರೊಂದಿಗೆ ೧೯೪೮ರಲ್ಲಿ `ಭುಲಾಯಿ ಪದಗಳು' ಎಂಬ ಜಾನಪದ ಕಥನ ಗೀತೆಗಳ ಪುಸ್ತಕವು ಪ್ರಕಟಿಸಿದ್ದಾರೆ. ಇದು ಸ್ವಾತಂತ್ರ‍್ಯ ನಂತರದ ಬೀದರದ ಮೊದಲ ಗ್ರಂಥವೆAಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೈದರಾಬಾದ ನಿಜಾಮನ ಆಳ್ವಿಕೆಯ ಕಾಲದಲ್ಲಿ ನಡೆದ ರಜಾಕಾರರ ಗೋರ್ಟಾ ಹತ್ಯಾಕಾಂಡದ ನೋವಿನ ಕತೆಗಳು ಇದರಲ್ಲಿವೆ. ಇವರು ೧೯೫೭ರಲ್ಲಿ ಶಾರದಾ ಸಂಗೀತ ವಿದ್ಯಾಲಯ ಸ್ಥಾಪಿಸಿ ಉಚಿತ ಊಟ ವಸತಿಯೊಂದಿಗೆ ಸಂಗೀತ ಶಿಕ್ಷಣ ನೀಡಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನವು ಮಾಡಿದ್ದಾರೆ. ೧೯೪೨ರಲ್ಲಿ ಸಂಗೀತ ರುದ್ರ ಸಂಘ ಸ್ಥಾಪನೆ ಮಾಡಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಗಳಲ್ಲಿ ಸಂಚರಿಸಿ ಅನೇಕ ಕಾರ್ಯಕ್ರಮಗಳು ನಡೆಸಿಕೊಟ್ಟಿದ್ದಾರೆ. ಮತ್ತು ಶ್ರೀ. ಷ.ಬ್ರ.ರಾಚೋಟಿ ಶಿವಾಚಾರ್ಯರ ಶ್ರೀರುದ್ರ ಮಂತ್ರಗಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ದತಿಯಲ್ಲಿ ಸ್ವರ ಸಂಯೋಜನೆಯು ಮಾಡಿ ಸಂಗೀತ ರುದ್ರ ಪಿತಾಮಹ' ಎನಿಸಿಕೊಂಡಿದ್ದಾರೆ. ಇವರಿಗೆ ೧೯೭೬ರಲ್ಲಿ ಬೀದರ ಕಸಾಪ ಪ್ರಶಸ್ತಿ, ೧೯೮೨ರಲ್ಲಿ ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಉದಗಿರ ಹಾವಗಿ ಮಠದಿಂದ ಪಂ.ಬಸವರಾಜ ರಾಜಗುರು ಪ್ರಶಸ್ತಿ, ೧೯೮೫ರಲ್ಲಿ `ವೇದಗಾನ ಸಾರ್ವಭೌಮ ಪ್ರಶಸ್ತಿ, ೧೯೯೨ರಲ್ಲಿ ಕಾಶಿ ಜಂಗಮವಾಡಿ ಮಠದಿಂದ ಶ್ರೀ ರುದ್ರ ಸಂಗೀತಚಾರ್ಯ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೯ರಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಸಂಗೀತ ರುದ್ರ ವಿಶಾರದ ಪ್ರಶಸ್ತಿ, ೨೦೦೭ರಲ್ಲಿ ಬೀದರ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದಿAದ ಪಂಚಾಕ್ಷರಿ ಪ್ರಶಸ್ತಿ, ೨೦೦೦ರಲ್ಲಿ ಹರಿಯಾಣ ರಾಜ್ಯದ ಪಾಣಿಪತ್ ಪಟ್ಟಣದ ಜೈಮಿನಿ ಅಕಾಡೆಮಿ ಪಾಣಿಪತ್ ವತಿಯಿಂದ ಬಿಸವೀ ಶತಾಬ್ದಿ ರತ್ನ ಸಮ್ಮಾನ್ ಪ್ರಶಸ್ತಿ, ಹಾಗೂ ಹಾರಕೂಡ ಹೀರೆಮಠ ಸಂಸ್ಥಾನದ ವತಿಯಿಂದ ಪೂಜ್ಯ.ಶ್ರೀ. ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು ಗಾನರತ್ನ ಸುಧಾರಕ ಪ್ರಶಸ್ತಿಯು ನೀಡಿ ಗೌರವಿಸಿದರೆ, ೨೦೦೩ರಲ್ಲಿ ಉಜ್ಜಯಿನಿಯ ಪೀಠದಿಂದ ಸಂಗೀತ ರುದ್ರ ವಿಭೂಷಣ ಪ್ರಶಸ್ತಿ, ೨೦೦೬ರಲ್ಲಿ ವೀರಶೈವ ಅರ್ಚಕರ ಮತ್ತು ಪುರೋಹಿತ ಸಂಘದಿAದ ಪುರೋಹಿತ ರತ್ನ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೨೦೧೫ರಿಂದ ಗೋರ್ಟಾದ ಶ್ರೀ ಸಂಗೀತ ರುದ್ರೇಶ್ವರ ಸಂಸ್ಥಾನವು ಸಾಹಿತಿ, ಸಂಗೀತಗಾರರು ಮತ್ತು ಸ್ವತಂತ್ರ ಹೋರಾಟಗಾರ ಚಿಂತಕರೊಬ್ಬರಿಗೆ ಪಂ.ವಿರೂಪಾಕ್ಷಯ್ಯ ಸಮ್ಮಾನ್' ಎಂಬ ಇವರ ಹೆಸರಿನ ಪ್ರಶಸ್ತಿಯು ನೀಡಿ ಗೌರವಿಸುತ್ತಿದೆ. ಇವರ ಏಳು ಜನ ಮಕ್ಕಳಲ್ಲಿ ಪ್ರೊ.ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಇವರು ಖ್ಯಾತ ಸಂಗೀತಗಾರರು ಮತ್ತು ಸಾಹಿತಿಗಳಾಗಿದರೆ, ಇನ್ನೊರ್ವರು ಡಾ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಸಾಹಿತಿ ಹಾಗೂ ಬೆಮಳಖೇಡ ಹೀರೆಮಠ ಸಂಸ್ಥಾನದ ಮಠಾಧಿಪತಿಯಾಗಿದ್ದಾರೆ. ಇವರು ೧೯-೫-೨೦೧೨ರಲ್ಲಿ ಲಿಂಗೈಕ್ಯರಾಗಿದ್ದು ಬೀದರ ಜಿಲ್ಲೆಯ ಕನ್ನಡ ಸಾಹಿತ್ಯ ಹಾಗೂ ಸಂಗೀತಕ್ಕೆ ತುಂಬಲಾರದ ನಷ್ಟವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ