ಶುಕ್ರವಾರ, ಜನವರಿ 10, 2025
ಡಾ.ಚಿತ್ಕಳಾ ಜಿ.ಮಠಪತಿ
ಸಾಹಿತಿ ಹಾಗೂ ಕವಯತ್ರಿಯಾದ ಡಾ.ಚಿತ್ಕಳಾ ಜಿ.ಮಠಪತಿಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಚನ್ನವೀರಯ್ಯ ಮತ್ತು ಸರ್ವಮಂಗಳಾ ದಂಪತಿಗಳಿಗೆ ದಿನಾಂಕ ೧೬-೧೦-೧೯೬೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್.ಪಿ.ಎಚ್.ಡಿ ಪದವಿಧರರಾದ ಇವರು ಬಸವಕಲ್ಯಾಣದ ಜಯಚನ್ನವೀರ ಸ್ವಾಮಿಯವರ ಧರ್ಮಪತ್ನಿಯಾಗಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದ ವಿಜ್ಞಾನೇಶ್ವರ ಸರ್ಕಾರಿ ಮಹಾವಿದ್ಯಾಲಯ ಮರತೂರಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ಹಲವಾರು ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, `ಶರಣರ ಕೌಟುಂಬಿಕ ಮೌಲ್ಯಗಳು,' `ಮಂತ್ರ ಯೋಗ' ಎಂಬ ವೈಚಾರಿಕ ಸಾಹಿತ್ಯ, ಮತ್ತು `ಡಾ.ಶೈಲಜಾ ಉಡಚಣರ ಸಮಗ್ರ ಸಾಹಿತ್ಯ ಒಂದು ಅಧ್ಯಯನ' `ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮರು' ಎಂಬ ಸಂಶೋಧನಾ ಕೃತಿಗಳು ಹಾಗೂ `ಜೇಡರ ದಾಸಿಮಯ್ಯ' `ಶಕ್ತಿ ಸ್ವರೂಪಣಿದೇವಿ ಶಿವಬಸಮ್ಮ' `ಮೋಳಿಗೆಯ ಮಹಾದೇವಿ' ಎಂಬ ಚರಿತ್ರೆಗಳು.ಮತ್ತು `ಬೀದರ ಜಿಲ್ಲೆಯ ಸೃಜನೇತರ ಸಾಹಿತ್ಯ' `ಆಧುನಿಕ ಕನ್ನಡ ಕಾವ್ಯ' `ಕನ್ನಡ ಭಾಷಾ ವಿಜ್ಞಾನ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಮತ್ತು `ಮಹಿಳಾ ಸಾಹಿತ್ಯ ಸಂಕಥನ' ಎಂಬ ಕೃತಿ ಮುದ್ರಣದ ಹಂತದಲ್ಲಿದೆ. ಇವರ `ಆಧುನಿಕ ಕನ್ನಡ ಕಾವ್ಯ' ಮತ್ತು `ಕನ್ನಡ ಭಾಷಾ ವಿಜ್ಞಾನ' ಎಂಬ ಕೃತಿಗಳು ಗುಲ್ಬರ್ಗ ವಿಶ್ವವಿದ್ಯಾಲಯದ ವಿದ್ಯಾರ್ಥಿಯಗಳಿಗೆ ಪಠ್ಯ ಪುಸ್ತಕಗಳಾಗಿ ಮುದ್ರಣಗೊಂಡಿದವು. ಇವರಿಗೆ ಚಿತ್ರದುರ್ಗ ಮಠದಿಂದ ಬಸವಶ್ರೀ, ಬಸವ ಚೇತನ, ಬಸವ ಜ್ಯೋತಿ ಎಂಬ ಪ್ರಶಸ್ತಿ ಲಭಿಸಿದರೆ, ಬೀದರ ಜಿಲ್ಲೆಯ ಪ್ರಥಮ ಮಹಿಳಾ ಸಮ್ಮೇಳನದಲ್ಲಿ `ಸಾಹಿತ್ಯ ಸಾಧಕಿ' ಎಂಬ ಪ್ರಶಸ್ತಿ, ಜೇವರ್ಗಿಯಿಂದ `ಸಾಹಿತ್ಯ ರತ್ನ' ಪ್ರಶಸ್ತಿ, ಭಾಲ್ಕಿ ಮಠದಿಂದ ಆಯ್ದಕ್ಕಿ ಮಾರಯ್ಯ ಲಕ್ಕಮರ ಕೃತಿಗೆ `ಉತ್ತಮ ಪುಸ್ತಕ ಪ್ರಶಸ್ತಿ, ಸೇಡಂನ ಹಾರಕೂಡ ಶ್ರೀಗಳ ೫೬ನೇ ಹುಟ್ಟು ಹಬ್ಬದ ಸಮಿತಿಯಿಂದ `ಸಾಹಿತ್ಯ ಸಾಧಕಿ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹ, ರೂಪಕ, ಭಾಷಣ, ಪುಸ್ತಕ ಪರಿಚಯ ಮೊದಲಾದ ಕಾರ್ಯಕ್ರಮಗಳು ಆಕಾಶವಾಣಿ ದೂರದರ್ಶನದಿಂದಲೂ ಪ್ರಸಾರವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ